ಕುಷ್ಟಗಿ: ಪಟ್ಟಣದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಖ್ಯ ಪ್ರವೇಶ ದ್ವಾರ ಬಂದ್ ಆಗಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ನಿತ್ಯ ಸಹಸ್ರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರುತ್ತಿದ್ದು, ನಿಲ್ದಾಣದ ಒಳಗೆ ಹೋಗಲು ಮತ್ತು ಹೊರ ಬರಲು ಪರದಾಡುವಂತಾಗಿದೆ. ಬಸ್‌ಗಳ ಆಗಮನ ಮತ್ತು ನಿರ್ಗಮನದ ದಾರಿಯಲ್ಲಿಯೇ ನಡೆದಾಡುವಂತಾಗಿದೆ. ಬಸ್‌ಗಳು ಬರುವ ಹಾಗೂ ಹೋಗುವಾಗ ಆಯ ತಪ್ಪಿದರೆ ಪ್ರಯಾಣಿಕರಿಗೆ ತೊಂದರೆ ತಪ್ಪಿದ್ದಲ್ಲ. ಬಸ್‌ಗಳಷ್ಟೇ ಅಲ್ಲ ಬಹಳಷ್ಟು ಸಂಖ್ಯೆಯಲ್ಲಿ ಖಾಸಗಿ ವಾಹನಗಳೂ ಇದೇ ದಾರಿಯನ್ನು ಬಳಸುತ್ತಿರುವುದರಿಂದ ಪಡಿಪಾಟಲು ಅಷ್ಟಿಷ್ಟಲ್ಲ ಎಂದು ಅನೇಕ ಪ್ರಯಾಣಿಕರು ಸಮಸ್ಯೆ ವಿವರಿಸಿದರು.
ಆಗಿದ್ದೇನು: ಪ್ರಯಾಣಿಕರಿಗಾಗಿಯೇ ಇರುವ ಮುಖ್ಯ ಪ್ರಮೇಶ ದ್ವಾರಕ್ಕೆ ಅಡ್ಡಲಾಗಿ ಒಳಗೆ ಹೋಗುವುದಕ್ಕೂ ಜಾಗ ಇಲ್ಲದಂತೆ ಆಟೊಗಳು ಸಾಲಾಗಿ ನಿಂತಿರುತ್ತವೆ. ಅಲ್ಲದೇ ಸಾರಿಗೆ ಘಟಕದವರು ದಾರಿಗೆ ಅಡ್ಡಲಾಗಿ ಕಬ್ಬಿಣದ ಕಂಬಿ ಹಾಕಿದ್ದಾರೆ. ಇದರಿಂದ ಒಳ ಬರಲು ಮತ್ತು ಹೊರ ಹೋಗಲು ಅಪಾಯಕಾರಿ ಮಾರ್ಗ ಅನುಸರಿಸಬೇಕಿದೆ. ಮುಖ್ಯ ಪ್ರವೇಶ ದ್ವಾರ ಇರುವುದಾದರೂ ಏತಕ್ಕೆ? ಎಂದು ಪ್ರಯಾಣಿಕರಾದ ಈಶ್ವರಗೌಡ ಪಾಟೀಲ, ಪ್ರಹ್ಲಾದ ಬೆಟಗೇರಿ ಪ್ರಶ್ನಿಸಿದರು.
ಪ್ರಯಾಣಿಕರಿ ಇರುವ ದಾರಿಗೆ ಅಡ್ಡಲಾಗಿ ಆಟೊ ನಿಲ್ಲಿಸುವುದು ಸರಿಯೆ ಎಂದು ಕೇಳಿದರೆ ಕೆಲ ಚಾಲಕರು ಜಗಳಕ್ಕಿಳಿಯುತ್ತಾರೆ ಎಂದು ಜನರು ಬೇಸರ ಹೊರಹಾಕಿದರು. ಈ ಕುರಿತು ಪ್ರತಿಕ್ರಿಯಿಸಿ ಅಳಲು ತೋಡಿಕೊಂಡ ಆಟೊ ಚಾಲಕರು, ಬೇರೆ ಕೆಲಸವಿಲ್ಲದ ಕಾರಣ ಆಟೊ ನಡೆಸಿ ಜೀವನ ಸಾಗಿಸುತ್ತಿದ್ದೇವೆ. ಬಸ್ ನಿಲ್ದಾಣದ ಬಳಿ ಆಟೊ ನಿಲ್ಲಿಸುವುದಕ್ಕೆ ಪರ್ಯಾಯ ಜಾಗವಿಲ್ಲ. ಇದಕ್ಕೆ ಅಧಿಕಾರಿಗಳೇ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮಕ್ಕಳು ಮಹಿಳೆಯರು ವೃದ್ಧರು ಬಸ್ ನಿಲ್ದಾಣದ ಒಳಳಕ್ಕೆ ಹೋಗಬೇಕೆಂದರೆ ಬಹಳಷ್ಟು ತೊಂದರೆ ಇದೆ. ಅಧಿಕಾರಿಗಳು ಗಮನಹರಿಸಬೇಕು.ವೀರೇಶ ಮಠಪತಿ ಪ್ರಯಾಣಿಕ
ಮುಖ್ಯದ್ವಾರದ ಬಳಿ ಆಟೊ ನಿಲ್ಲಿಸದಂತೆ ಈ ಹಿಂದೆಯೆ ಚಾಲಕರಿಗೆ ಸೂಚಿಸಲಾಗಿತ್ತು. ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದುಸುಂದರಗೌಡ ಪಾಟೀಲ ಘಟಕ ವ್ಯವಸ್ಥಾಪಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.