ಅಳವಂಡಿ: ಸಮೀಪದ ವದಗನಾಳ ಗ್ರಾಮದ ಹಮ್ಮಿಗೇಶ್ವರ ಸೇವಾ ಸಮಿತಿ ವತಿಯಿಂದ ಉಚಿತ ಶಿಕ್ಷಣ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಸಮಾರಂಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ ಹರ್ತಿ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಶಿಬಿರ ಮಾಡುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ. ಆದರೆ ವದಗನಾಳ ಗ್ರಾಮಸ್ಥರು ಹಾಗೂ ಹಮ್ಮಿಗೇಶ್ವರ ಸೇವಾ ಸಮಿತಿಯವರು ಗ್ರಾಮದ ಮಕ್ಕಳು ನಿರಂತವಾಗಿ ಶಿಕ್ಷಣದಲ್ಲಿ ತೊಡಗಬೇಕು ಎಂಬ ಉದ್ದೇಶದಿಂದ ಉಚಿತ ಬೇಸಿಗೆ ಶಿಬಿರ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದರು.
‘ಶಿಕ್ಷಣ ಪಡೆಯಲು ಸಾಕಷ್ಟು ಅವಕಾಶಗಳಿವೆ. ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಉತ್ತೇಜಿಸಬೇಕು. ಜೊತೆಗೆ ಉನ್ನತ ಹುದ್ದೆ ಅಲಂಕರಿಸಲು ಪ್ರೋತ್ಸಾಹ ನೀಡಬೇಕು’ ಎಂದರು.
ಡಿಡಿಪಿಐ ಶ್ರೀಶೈಲ್ ಬಿರಾದಾರ ಮಾತನಾಡಿದರು. ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸವನಗೌಡ ಪಾಟೀಲ, ಎಲ್.ಪಿ.ಪರನಗೌಡ್ರು, ಉದ್ಯಮಿ ವೆಂಕಟೇಶ ಬಾರಕೇರ, ಪಿ.ಎಚ್.ನೂರಬಾಷ, ವೀರೇಶ ಸಜ್ಜನ, ಶಿವಪ್ಪ ಶಹಾಪೂರ, ಮಹಾಂತೇಶ ಪಾಟೀಲ, ಸಮಿತಿಯ ಅಧ್ಯಕ್ಷ ಬಸವನಗೌಡ ಗೊಂದಿಹೊಸಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಬೆದವಟ್ಟಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.