ADVERTISEMENT

ಕೊಪ್ಪಳ: ಕ್ರಿಸ್‌ಮಸ್‌ ಸಂಭ್ರಮ; ಚರ್ಚ್‌ಗಳಿಗೆ ಅಲಂಕಾರ

ಇಂದು ಆಚರಣೆ: ಹಬ್ಬದ ಮುನ್ನಾದಿನ ಮಧ್ಯರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 4:44 IST
Last Updated 25 ಡಿಸೆಂಬರ್ 2025, 4:44 IST
ಕೊಪ್ಪಳದ ಎಸ್‌ಎಫ್‌ಎಸ್‌ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಗೋದಲಿಯನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಕೊಪ್ಪಳದ ಎಸ್‌ಎಫ್‌ಎಸ್‌ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಗೋದಲಿಯನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು –ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ    

ಕೊಪ್ಪಳ: ಕ್ರಿಸ್‌ಮಸ್‌ ಆಚರಣೆಗೆ ಸಡಗರ, ಸಂಭ್ರಮ ಹೆಚ್ಚಾಗಿದೆ. ಜಿಲ್ಲಾ ಕೇಂದ್ರವೂ ಸೇರಿದಂತೆ ಜಿಲ್ಲೆಯಾದ್ಯಂತ ಚರ್ಚ್‌ಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದ್ದು, ಮನೆಗಳು ನಕ್ಷತ್ರ ಬುಟ್ಟಿಗಳಿಂದ ಸಿಂಗಾರಗೊಂಡಿವೆ. ಚರ್ಚ್‌ಗಳಲ್ಲಿ ಪ್ರಾರ್ಥನೆ ಮತ್ತು ಧಾರ್ಮಿಕ ಸಭೆಗಳು ನಡೆದವು.

ಸಂತ ಯೇಸುಕ್ರಿಸ್ತನ ಜನ್ಮದಿನದ ಅಂಗವಾಗಿ ‘ಕ್ರಿಸ್‌ಮಸ್’ ಆಚರಣೆ ಮಾಡಲಾಗುತ್ತಿದ್ದು, ಕ್ರೈಸ್ತ ಸಮುದಾಯದವರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಿನ ನಗರಸಭೆ ಹಿಂಭಾಗದಲ್ಲಿರುವ ಕ್ರಿಸ್ತಜ್ಯೋತಿ ಇಸಿಐ ಚರ್ಚ್‌, ಬಿ.ಟಿ.ಪಾಟೀಲ ನಗರದಲ್ಲಿರುವ ಸೇಂಟ್‌ ಫ್ರಾನ್ಸಿಸ್‌ ಡೆಸೆಲ್ಸ್‌ (ಎಸ್‌ಎಫ್‌ಎಸ್‌) ಚರ್ಚ್‌ನಲ್ಲಿ ಮಕ್ಕಳು, ಹಿರಿಯರು ಹಾಗೂ ಮಹಿಳೆಯರು ಹೊಸಬಟ್ಟೆ ಧರಿಸಿ ಗುರುವಾರ ಪ್ರಾರ್ಥನೆ ಸಲ್ಲಿಸುವರು. ಬುಧವಾರ ಮಧ್ಯರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಡಿನ ಶಾಂತಿ ನೆಲೆಸುವಂತೆ ಕೋರಿದರು.

ಎಸ್‌ಎಫ್‌ಎಸ್‌ ಚರ್ಚ್‌ನಲ್ಲಿ ಯೇಸುಕ್ರಿಸ್ತನ ಜನನ ಹಾಗೂ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಚಿತ್ರಣವನ್ನು ನಿರ್ಮಿಸಲಾಗಿತ್ತು. ಎಲ್ಲ ಚರ್ಚ್‌ಗಳಲ್ಲಿ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು. ಯೇಸುಕ್ರಿಸ್ತನ ಜನನ, ಬೆಳೆದು ಬಂದ ಹಾದಿ, ಧರ್ಮ ಗುರುವಾಗಿದ್ದು, ಎದುರಿಸಿದ ಸಂಕಷ್ಟಗಳು ಹೀಗೆ ಬದುಕಿನ ಗಾಥೆಯನ್ನು ವಿವರಿಸುವ ಮಾದರಿ ಗಮನ ಸೆಳೆಯುವಂತೆ ಇತ್ತು. ತಡರಾತ್ರಿಯ ತನಕವೂ ಅಂತಿಮ ಹಂತದ ಸಿದ್ಧತಾ ಕಾರ್ಯಗಳು ನಡೆದಿದ್ದ ಚಿತ್ರಣ ಕಂಡುಬಂದಿತು.

ADVERTISEMENT

ಕ್ರಿಸ್‌ಮಸ್‌ ಅಂಗವಾಗಿ ಜಿಲ್ಲಾ ಪಾಸ್ಟರ್ಸ್ ಸಂಘದ ವತಿಯಿಂದ ಡಿಸೆಂಬರ್‌ 1ರಿಂದಲೇ ಕ್ರಿಸ್ ಮಾಸಾಚರಣೆಗೆ ಚಾಲನೆ ನೀಡಲಾಗಿತ್ತು. 25 ದಿನಗಳಿಂದ ಕ್ರಿಸ್‌ಮಸ್‌ ತಾತನ ಉಡುಗೆ ತೊಟ್ಟು ಮನೆ ಮನೆಗಳಿಗೆ ತೆರಳಿ ನಾಟ್ಯ ಮತ್ತು ಭಜನೆ ಮಾಡುತ್ತಾ ಹಬ್ಬದ ಶುಭಾಶಯಗಳನ್ನು ಕೋರಲಾಗುತ್ತಿದೆ.

ಅಲಂಕೃತಗೊಂಡಿದ್ದ ಕೊಪ್ಪಳದ ಎಸ್‌ಎಫ್‌ಎಸ್‌ ಚರ್ಚ್‌ನ ಹೊರನೋಟ

ಶಾಂತಿ ಸಾರುವುದೇ ಹಬ್ಬದ ಉದ್ದೇಶ

‘ಸಮಾಜದಲ್ಲಿ ಎಲ್ಲ ವರ್ಗಗಳ ಜನ ಶಾಂತಿ ಹಾಗೂ ನೆಮ್ಮದಿಯಿಂದ ಬಾಳಬೇಕು ಎನ್ನುವ ನಮ್ಮೆಲ್ಲರ ಪ್ರಾರ್ಥನೆ ಹಬ್ಬದ ಸಮಯದಲ್ಲಿ ಪ್ರಮುಖವಾಗಿರುತ್ತದೆ’ ಎಂದು ಎಸ್ಎಫ್‌ಎಸ್‌ ಚರ್ಚ್‌ನ ಫಾದರ್‌ ಜಬಮಲೈ ಎ. ಅವರು ಹೇಳಿದರು. ‘ಬುಧವಾರ ಮಧ್ಯರಾತ್ರಿ ಪ್ರಾರ್ಥನೆ ಸಲ್ಲಿಸಲಾಗಿದ್ದು ಕ್ರಿಸ್‌ಮಸ್‌ ದಿನವಾದ ಗುರುವಾರವೂ ಸಾಮೂಹಿಕವಾಗಿ ಪ್ರಾರ್ಥನೆ ಇರುತ್ತದೆ. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗುತ್ತದೆ.  ಎಲ್ಲರಿಗೂ ಶಾಂತಿ ನೆಮ್ಮದಿ ಹಾಗೂ ಆರೋಗ್ಯ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಹೊಸವರ್ಷದ ಶುಭಾಶಯ ಕೋರಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.