ಗಂಗಾವತಿ: ‘ಕಾರಟಗಿ ನಗರದಲ್ಲಿ ಪ್ರಥಮ ದರ್ಜೆ ಕಾಲೇಜು ಮಂಜೂರು, ವಿವಿಧ ಶಾಲೆ-ಕಾಲೇಜುಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಬಗ್ಗೆ ತಹಶೀಲ್ದಾರ್ ಕುಮಾರಸ್ವಾಮಿ ಗುರುವಾರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದು ಅವರನ್ನು 2 ತಾಸು ಕಾಯಿಸಿ ಸಭೆ ಮುಂದೂಡಿರುವುದು ಖಂಡನೀಯ’ ಎಂದು ಎಸ್ಎಫ್ಐ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಸಂಘಟನೆಯ ಗಂಗಾವತಿ ತಾಲ್ಲೂಕು ಅಧ್ಯಕ್ಷ ನಾಗರಾಜ ಮಾತನಾಡಿ, ‘ಕಾರಟಗಿಯಲ್ಲಿ ಪ್ರಥಮ ದರ್ಜೆ ಕಾಲೇಜು ಇಲ್ಲದ ಕಾರಣ ಆಗುತ್ತಿರುವ ತೊಂದರೆ ಸೇರಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿ ಕಾರಟಗಿ ತಹಶೀಲ್ದಾರ್ ಮತ್ತು ತಾ.ಪಂ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಚರ್ಚಿಸಲು ಸೆ.18ರಂದು ಮಧ್ಯಾಹ್ನ ಕಾರಟಗಿ ತಹಶೀಲ್ದಾರ್ ಕುಮಾರಸ್ವಾಮಿ ಸಭೆ ಕರೆದಿದ್ದರು. ಎಸ್ಎಫ್ಐ ಸಂಘಟನೆಯವರೂ ಸೇರಿ ಅನೇಕ ಇಲಾಖೆ ಅಧಿಕಾರಿಗಳನ್ನೂ ಕರೆದಿದ್ದರು. ಆದರೆ 2 ಗಂಟೆಗಳ ಕಾಲ ಎಲ್ಲರನ್ನೂ ಕಾಯಿಸಿ ಸಭೆಗೆ ಬಾರದೆ ಮುಂದೂಡಿ ಅಪಹಸ್ಯ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸುವ ತಹಶೀಲ್ದಾರ್ ನಮಗೆ ಅಗತ್ಯವಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡು ತಮ್ಮ ನೇತೃತ್ವತ್ವದಲ್ಲಿ ಕಾರಟಗಿ ತಾಲ್ಲೂಕಿಗೆ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡುವ ಜೊತೆ ವಿವಿಧ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಸಭೆ ನಡೆಸಬೇಕು. ಇಲ್ಲವಾದಲ್ಲಿ ಎಸ್ಎಫ್ಐ ಸಂಘಟನೆ ಉಪವಾಸ ಸತ್ಯಾಗ್ರಹ ನಡೆಸುತ್ತದೆ’ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಶಿವಕುಮಾರ, ಗಂಗಾವತಿ ತಾಲ್ಲೂಕು ಕಾರ್ಯದರ್ಶಿ ಬಾಲಾಜಿ, ಉಪಾಧ್ಯಕ್ಷ ಶರೀಫ್, ದರ್ಶನ್, ಶರಣು ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.