ADVERTISEMENT

ಹತ್ತಿ ಮಾರಿದರೆ ಹತ್ತು ಕೆ.ಜಿ ಖೋತಾ: ರೈತರ ಆಕ್ರೋಶ

ತೂಕದಲ್ಲಿ ವ್ಯತ್ಯಾಸ ವ್ಯಾಪಾರಿಗಳಿಂದ ಮೋಸ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 3:10 IST
Last Updated 24 ಸೆಪ್ಟೆಂಬರ್ 2025, 3:10 IST
ಕುಷ್ಟಗಿ ಎಪಿಎಂಸಿಯಲ್ಲಿ ಹತ್ತಿ ಬೆಳೆಗಾರರು ವರ್ತಕರ ವಿರುದ್ಧ ಆಕ್ರೋಶ ವ್ಯಕ್ತಡಿಸಿದರು
ಕುಷ್ಟಗಿ ಎಪಿಎಂಸಿಯಲ್ಲಿ ಹತ್ತಿ ಬೆಳೆಗಾರರು ವರ್ತಕರ ವಿರುದ್ಧ ಆಕ್ರೋಶ ವ್ಯಕ್ತಡಿಸಿದರು   

ಕುಷ್ಟಗಿ: ಹತ್ತಿ ಖರೀದಿ ವೇಳೆ ತೂಕದಲ್ಲಿ ರೈತರಿಗೆ ಬಹಳಷ್ಟು ಅನ್ಯಾಯ ಎಸಗಲಾಗುತ್ತಿದೆ ಎಂದು ದೂರಿದ ಅನೇಕ ರೈತರು ಹತ್ತಿ ಖರೀದಿದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಇಲ್ಲಿಯ ಎಪಿಎಂಸಿ ಕಚೇರಿ ಬಳಿ ನಡೆಯಿತು.

ರೈತರು ಮತ್ತು ವರ್ತಕರ ಮಧ್ಯೆ ದಲ್ಲಾಲಿ ಅಂಗಡಿ ಬಳಿ ವಾಗ್ವಾದ ಉಂಟಾಗಿದ್ದರಿಂದ ಯಾರೋ ಪೊಲೀಸ್‌ ತುರ್ತು ಗಸ್ತು ಸೇವೆ (112)ಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಎಪಿಎಂಸಿ ಕಚೇರಿ ಬಳಿ ಕರೆತಂದು ಸಮಾಧಾನಪಡಿಸಿದರು.

ಆಗಿದ್ದು ಇದು: ಕ್ಯಾದಿಗುಪ್ಪಾ, ಕಡೇಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಿಂದ ರೈತರು ವಾಣಿಜ್ಯಬೆಳೆ ಹತ್ತಿ ಮಾರಾಟಕ್ಕೆ ಪ್ರಭು ರೆಡ್ಡಿ ಎಂಬುವವರ ಬಳಿ ಬಂದಿದ್ದರು. ಆದರೆ ಹತ್ತಿ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಅನುಮಾನಗೊಂಡ ರೈತರು ಅಂಗಡಿಯಲ್ಲಿ ತೂಗಿದ ಹತ್ತಿಯನ್ನೇ ಎಪಿಎಂಸಿಯಲ್ಲಿ ಬೇರೆ ತೂಕದ ಯಂತ್ರದಲ್ಲಿ ತೂಗಿದಾಗ ಸರಿಯಾಗಿ 10 ಕೆ.ಜಿ. ಹೆಚ್ಚಿಗೆ ಇದ್ದುದು ಕಂಡುಬಂದಿತು.

ADVERTISEMENT

ಈ ವಿಷಯ ತಿಳಿಯುತ್ತಿದ್ದಂತೆ ರೈತರು ವ್ಯಾಪಾರಿಯ ವಿರುದ್ಧ ಆಕ್ರೋಶಗೊಂಡು ಎಪಿಎಂಸಿ ಕಚೇರಿ ಆವರಣದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ತೂಕದಲ್ಲಿ ವ್ಯತ್ಯಾಸವಾಗಿಲ್ಲ ಎಂದೇ ವ್ಯಾಪಾರಿಗಳು ವಾದಿಸಿದರು. ಆದರೆ ಹತ್ತು ಕೆ.ಜಿ ಕಡಿಮೆಯಾಗುತ್ತಿದ್ದುದು ಪರೀಕ್ಷೆ ನಂತರ ಗೊತ್ತಾಯಿತು ಎಂದು ಸ್ಥಳದಲ್ಲಿದ್ದ ಪೊಲೀಸರೂ ದೃಢಪಡಿಸಿದರು.

‘ಇದು ಕೆಲ ರೈತರಿಗೆ ಆದ ಅನ್ಯಾಯವಲ್ಲ, ಇಷ್ಟು ದಿನಗಳಿಂದಲೂ ಅಂಗಡಿಯವರು ಇದೇ ರೀತಿ ಮೋಸ ಮಾಡಿದ್ದಾರೆ. ಆದರೆ ಈ ವಿಷಯ ಅನ್ಯಾಯಕ್ಕೊಳಗಾದ ರೈತರ ಗಮನಕ್ಕೆ ಬಂದಿಲ್ಲ. ಅನುಮಾನದಿಂದ ಪರೀಕ್ಷಿಸಿದಾಗ ತೂಕದಲ್ಲಿ ಮೋಸ ನಡೆದಿದ್ದು ಸ್ಪಷ್ಟವಾಯಿತು’ ಎಂದರು. ಈ ಬಗ್ಗೆ ಸಂಬಂಧಿಸಿದ ವರ್ತಕರ ವಿರುದ್ಧ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಈ ಕುರಿತು ಎಪಿಎಂಸಿಗೆ ದೂರು ಸಲ್ಲಿಸುವುದಾಗಿ ರೈತರು ಸ್ಥಳಕ್ಕೆ ತೆರಳಿದ್ದ ಸುದ್ದಿಗಾರರಿಗೆ ತಿಳಿಸಿದರು.

ಕಷ್ಟಪಟ್ಟು ಹತ್ತಿ ಬೆಳೆದು ತಂದರೆ ಮಾರುಕಟ್ಟೆಯಲ್ಲಿ ರೈತರಿಗೆ ಮೋಸವಾಗುತ್ತಿದೆ. ಇಂಥ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಿದ್ದ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.
– ನಾಗರಾಜ ಧನ್ನೂರು, ರೈತ

‘ಪ್ರತಿ ಬಾರಿ ಮೋಸ’

ಪೊಲೀಸರ ಸಮ್ಮುಖದಲ್ಲಿಯೇ ರೈತರು ತಮಗಾದ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಾದರೂ ಸಮಸ್ಯೆ ಏನಾಗಿದೆ ಎಂಬುದನ್ನು ತಿಳಿದು ಸಮಸ್ಯೆ ಪರಿಹರಿಸುವಲ್ಲಿ ಎಪಿಎಂಸಿ ಸಿಬ್ಬಂದಿ ಸ್ಪಂದಿಸದಿದ್ದುದು ರೈತರ ಮತ್ತಷ್ಟೂ ಆಕ್ರೋಶಕ್ಕೆ ಕಾರಣವಾಯಿತು. ಈ ವರ್ಷ ಅತಿವೃಷ್ಠಿಯಿಂದ ಹತ್ತಿಬೆಳೆ ಹಾಳಾಗಿ ರೈತರು ಬಹಳಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಹತ್ತಿಯನ್ನು ಮಾರಲು ಬಂದರೆ ಇಲ್ಲಿ ಪ್ರತಿಬಾರಿಯ ತೂಕದಲ್ಲಿಯೂ ತಲಾ ಹತ್ತು ಕೆ.ಜಿ ಕಡಿಮೆ ಮಾಡಲಾಗುತ್ತದೆ. ಸಮಸ್ಯೆ ಹೇಳಲು ಬಂದರೆ ಎಪಿಎಂಸಿಯಲ್ಲಿ ಅಧಿಕಾರಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ದೂರಿದರು.

ಈ ಕುರಿತು ಸುದ್ದಿಗಾರರು ಕಚೇರಿಯಲ್ಲಿದ್ದ ‘ಡಿ’ ದರ್ಜೆ ನೌಕರರನ್ನು ವಿಚಾರಿಸಿದರೆ ಕಾರ್ಯದರ್ಶಿ ಸಹಕಾರ್ಯದರ್ಶಿ ಕೊಪ್ಪಳದಲ್ಲಿ ನಡೆದ ಸಭೆಗೆ ಹೋಗಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.