ADVERTISEMENT

‘ಪವರ್‌’ ಇದ್ದಾಗಲೇ ಕೊಡಲಿಲ್ಲ ವಿದ್ಯುತ್‌: ಸಿ.ಟಿ ರವಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 16:33 IST
Last Updated 12 ಮಾರ್ಚ್ 2023, 16:33 IST
   

ಕೊಪ್ಪಳ: ’ತಮ್ಮ ಸರ್ಕಾರ ಅಧಿಕಾರದಲ್ಲಿದ್ದರೂ, ತಾವೇ ಇಂಧನ ಖಾತೆ ಸಚಿವರಾಗಿದ್ದರೂ ಸರಿಯಾಗಿ ವಿದ್ಯುತ್‌ ಪೂರೈಕೆ ಮಾಡದ ಡಿ.ಕೆ. ಶಿವಕುಮಾರ್‌ ಈಗ 200 ಯುನಿಟ್‌ ಉಚಿತವಾಗಿ ವಿದ್ಯುತ್‌ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಸಾವಿರಾರು ಜನ ಕಾರ್ಯಕರ್ತರನ್ನು ಉದ್ದೇಶಿಸಿ ಭಾವಾವೇಷದಿಂದ ಮಾತನಾಡಿದ ರವಿ ‘ದೇಶಕ್ಕೆ ಭಯೋತ್ಪಾದನೆಯ ಭಾಗ್ಯ ಕೊಟ್ಟ ಕಾಂಗ್ರೆಸ್‌ಗೆ ಸುಳ್ಳೇ ಮನೆದೇವರು. ಜನರಿಗೆ ಮೋಸ ಮಾಡುವ ಸಲುವಾಗಿಯೇ ಗಾಂಧಿ ಎಂದು ಸೋನಿಯಾ ಹೆಸರು ಇಟ್ಟುಕೊಂಡಿದ್ದಾರೆ. ಇವರೇನು ಗಾಂಧಿ ವಂಶಸ್ಥರೇ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಾಗಿದೆ. ಈ ಪಕ್ಷ ಅಧಿಕಾರಕ್ಕೆ ಬಂದರೆ ತುಕಡೆ ಗ್ಯಾಂಗ್‌ಗಳು ಹೊರಗೆ ಬರುತ್ತವೆ, ಕುಕ್ಕರ್ ಬಾಂಬ್‌ ಬ್ರದರ್ಸ್‌ ಹೆಚ್ಚಾಗುತ್ತಾರೆ. ನಾವು ಬಾಲ ಬಿಚ್ಚಿದವರ ಹೆಡೆಮುರಿ ಕಟ್ಟಲು ಬುಲ್ಡೋಜರ್‌ ತೋರಿಸಬೇಕು. ಅದಕ್ಕಾಗಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ಕೊಡಿ. ಕೇಸರಿ, ಗುಲಾಬಿ, ಕುಂಕುಮ ಕಂಡರೆ ಆಗದ ಸೋ ಕಾಲ್ಡ್‌ ಕಾಂಗ್ರೆಸ್ಸಿಗರನ್ನು ಅಧಿಕಾರದಿಂದ ದೂರವಿಡಬೇಕು. ಮತಾಂಧ ಟಿಪ್ಪುವನ್ನು ವೈಭವಿಕರಿಸುತ್ತಿರುವ ಕಾಂಗ್ರೆಸ್‌ ಹಾಗೂ ಸಮಾನತೆಯನ್ನು ಬಿಂಬಿಸುತ್ತಿರುವ ಬಸವಣ್ಣನ ಅನುಭವ ಮಂಟಪದ ನಡುವಿನ ಚುನಾವಣೆ ಇದಾಗಲಿದೆ’ ಎಂದರು.

ADVERTISEMENT

ಸಂಸದ ಸಂಗಣ್ಣ ಕರಡಿ ಮಾತನಾಡಿ ‘ನೀರಾವರಿ ಯೋಜನೆಗಳಿಗೆ ನಾವು ಅಡಿಗಲ್ಲು ಹಾಕಿದರೆ ಕಾಂಗ್ರೆಸ್‌ ಅಡ್ಡಗಾಲು ಹಾಕಿತು. ಸಿದ್ದರಾಮಯ್ಯನವರ ಚೊಚ್ಚಲ ಮಗ ಎನಿಸಿಕೊಂಡ ಶಾಸಕ ರಾಘವೇಂದ್ರ ಹಿಟ್ನಾಳ, ಶಿವರಾಜ ತಂಗಡಗಿ ಮತ್ತು ಬಸವರಾಜ ರಾಯರಡ್ಡಿ ದುಂಬಾಲು ಬಿದ್ದರೂ ಹಣ ತರಲು ಆಗಲಿಲ್ಲ. ಆ ಕೆಲಸವನ್ನು ನಮ್ಮ ಬಿಜೆಪಿ ಸರ್ಕಾರ ಹಾಗೂ ಹಾಲಪ್ಪ ಆಚಾರ್‌ ಮಾಡಿದ್ದಾರೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್‌, ಶಾಸಕ ಪರಣ್ಣ ಮುನವಳ್ಳಿ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಪಕ್ಷದ ಗ್ರಾಮೀಣ ಮಂಡಲದ ಅಧ್ಯಕ್ಷ ಪ್ರದೀಪ ಹಿಟ್ನಾಳ, ಬಳ್ಳಾರಿ ವಿಭಾಗೀಯ ಪ್ರಭಾರಿ ಸಿದ್ದೇಶ ಯಾದವ, ಸಹ ಪ್ರಭಾರಿ ಚಂದ್ರಶೇಖರ ಪಾಟೀಲ ಹಲಗೇರಿ, ಮುಖಂಡರಾದ ಸಿ.ವಿ. ಚಂದ್ರಶೇಖರ, ನವೀನ ಗುಳಗಣ್ಣನವರ, ವಿರೂಪಾಕ್ಷಪ್ಪ ಸಿಂಗನಾಳ, ಸುನೀಲ್‌ ಹೆಸರೂರು, ಮಹಾಂತೇಶ ಮೈನಳ್ಳಿ, ಮಹಾಲಕ್ಷ್ಮಿ ಕಂದಾರಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.