ADVERTISEMENT

ಅಳವಂಡಿ: ಸೈಕಲ್‌ ಯಾತ್ರೆ; ಶಿವರಾಯಪ್ಪ ಸಾಹಸ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:59 IST
Last Updated 1 ಜನವರಿ 2026, 5:59 IST
<div class="paragraphs"><p>ಶಿವರಾಯಪ್ಪ ನೀರಲೋಟಿ</p></div>

ಶಿವರಾಯಪ್ಪ ನೀರಲೋಟಿ

   

ಅಳವಂಡಿ: ಕ್ರಾಂತಿಕಾರಿ ಭಗತಸಿಂಗ್ ಜನ್ಮ ಸ್ಥಳವಾದ ಪಂಜಾಬಿನ ಬಂಗಾ ಪಟ್ಟಣಕ್ಕೆ ಅಳವಂಡಿ ಸಮೀಪದ ಹಿರೇಸಿಂದೋಗಿ ಗ್ರಾಮದ ಶಿವರಾಯಪ್ಪ ನೀರಲೋಟಿ ಎಂಬ ಯುವಕ ಸೈಕಲ್‌ ಮೂಲಕ ಯಾತ್ರೆ ಆರಂಭಿಸಿದ್ದಾರೆ.

ಬೆಟಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವರಾಯಪ್ಪ ಮಹಾತ್ಮ ಗಾಂಧೀಜಿ ಅವರ ಸ್ವಚ್ಛ ಭಾರತ, ಸ್ವಸ್ಥ ಭಾರತ ಅಭಿಯಾನದ ಕುರಿತು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸುಮಾರು 2500 ಕಿ.ಮೀ‌. ಸೈಕಲ್ ಯಾತ್ರೆ ನಡೆಸುತ್ತಿದ್ದಾರೆ.

ADVERTISEMENT

ಒಂದೆಡೆ ಮೈ ಕೊರೆಯುವ ಚಳಿ, ಇನ್ನೊಂದೆಡೆ ಮಾರ್ಗದುದ್ದಕ್ಕೂ ಎದುರಾಗುವ ಪ್ರಾಕೃತಿಕ ಹಾಗೂ ದೈಹಿಕ ಸವಾಲುಗಳನ್ನು ಎದುರಿಸಿ ಗುರಿ ಮುಟ್ಟುವ ಅದಮ್ಯ ಆಸೆಯನ್ನು ಅವರು ಹೊಂದಿದ್ದಾರೆ. ಶಿವರಾಯಪ್ಪ ಅವರಿಗೆ ಈ ರೀತಿಯ ಸಾಧನೆ ಹೊಸದೇನೂ ಅಲ್ಲ.

ಹಿಂದೆ ಮಹಾತ್ಮ ಗಾಂಧಿ ಜನ್ಮ ಸ್ಥಳ ಪೋರಬಂದರ್ (1,500 ಕಿ.ಮೀ) ಹಾಗೂ ಸುಭಾಷ್ ಚಂದ್ರ ಬೋಸ್ ಜನಿಸಿದ ಕಟಕ್ (1,600 ಕಿ.ಮೀ) ಪಟ್ಟಣಕ್ಕೆ ಏಕಾಂಗಿಯಾಗಿ ಸೈಕಲ್ ಯಾನ ನಡೆಸಿದ್ದರು. ಈ ಸಲ ಭಗತ್ ಸಿಂಗ್ ಜನ್ಮ ಸ್ಥಳದತ್ತ ಸೈಕಲ್ ಹತ್ತಿಕೊಂಡು ಸವಾರಿ ಆರಂಭಿಸಿದ್ದಾರೆ. ಪ್ರಾಕೃತಿಕ ಏರುಪೇರು,
ಹವಾಗುಣ ವ್ಯತ್ಯಾಸಗಳನ್ನು ಎದುರಿಸುವುದನ್ನು ಅವರು ರೂಢಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಬೀಡ್, ಛತ್ರಪತಿ ಸಂಭಾಜಿ ನಗರ, ದುಲೆ, ಮಧ್ಯಪ್ರದೇಶದ ಇಂದೋರ್‌, ರಾಜಸ್ಥಾನದ ಕೋಟಾ, ಅಮೃತಸರ ಮಾರ್ಗದಲ್ಲಿ ಪ್ರವಾಸ ಆರಂಭಿಸಿದ್ದು, ಸೈಕಲ್‌ ದುರಸ್ತಿಯಾದರೆ ಬೇಕಾಗುವ ಪಂಚರ್ ಕಿಟ್, ಉಣ್ಣೆ ಅಂಗಿ, ಹೆಲ್ಮೆಟ್‌, ಹೊದಿಕೆ, ಎರಡು ಜೊತೆ ಬಟ್ಟೆಯ ಹಸಿಬೆ ಚೀಲ ಹೊತ್ತು ಸಾಗಿದ್ದಾರೆ. ನಿತ್ಯ ಕನಿಷ್ಠ 120 ಕಿ.ಮೀ. ಪೆಡಲ್‌ ತುಳಿಯುವ ಯೋಜನೆ ರೂಪಿಸಿಕೊಂಡಿದ್ದಾನೆ.

ಮಹಾರಾಷ್ಟ್ರ ಗಡಿ ದಾಟಿ ಮಧ್ಯಪ್ರದೇಶದತ್ತ ತೆರಳುತ್ತಿದ್ದು ವಿಪರೀತ ಚಳಿ ಹಾಗೂ ಮಂಜು ಕವಿದ ವಾತಾವರಣವಿದೆ. ಸೈಕಲ್‌ ಸವಾರಿಯೂ ಸವಾಲಿನಿಂದ ಕೂಡಿದ್ದರೂ ಗುರಿ ಮುಟ್ಟಿಯೇ ತೀರುವೆ
– ಶಿವರಾಯಪ್ಪ ನೀರಲೋಟಿ, ಸೈಕಲ್‌ ಯಾತ್ರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.