ADVERTISEMENT

ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ: ಬಿ.ಫೌಜಿಯಾ ತರನ್ನುಮ್

ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆ ಡಿಸೆಂಬರ್ 3ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 5:51 IST
Last Updated 30 ನವೆಂಬರ್ 2021, 5:51 IST
ಫೌಜಿಯಾ ತರುನ್ನುಮ್
ಫೌಜಿಯಾ ತರುನ್ನುಮ್   

ಕೊಪ್ಪಳ: ಜಿಲ್ಲೆಯ ಎಲ್ಲ 153 ಗ್ರಾಮ ಪಂಚಾಯಿತಿಗಳ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಅಭಿಯಾನ ಮಾದರಿಯಲ್ಲಿ ಡಿ.3 ರಿಂದ 8ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಐದುಗ್ರಾಮ ಪಂಚಾಯಿತಿಗಳನ್ನು ಗುಂಪುಗೂಡಿಸಿ ಒಂದು ಪ್ರಧಾನ ಗ್ರಾ.ಪಂ.ಯನ್ನಾಗಿ ಗುರುತಿಸಲಾಗಿದೆ. ಹೀಗೆ ಗುರುತಿಸಲಾದ ಪಂಚಾಯಿತಿಯಲ್ಲಿ ಕ್ಯಾಂಪ್ ನಡೆಸುವ ದಿನಾಂಕ, ಸ್ಥಳ, ಸಮಯ ಇತ್ಯಾದಿ ವಿವರಗಳನ್ನು ಪ್ರಚುರಪಡಿಸಲು ಈಗಾಗಲೇ ಪಿ.ಡಿ.ಒಗಳಿಗೆ ನಿರ್ದೇಶನ ನೀಡಲಾಗಿದೆ. ಸಫಾಯಿ ಕರ್ಮಚಾರಿಗಳ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಮಾತ್ರ ಸ್ವಯಂ ಘೋಷಿತ ಅರ್ಜಿಗಳನ್ನು ಕ್ಯಾಂಪ್‌ಗಳಲ್ಲಿ ನೀಡಬಹುದಾಗಿರುತ್ತದೆ ಎಂದರು.

ಒಣ ಶೌಚಾಲಯ ಸ್ವಚ್ಛಗೊ ಳಿಸುವವರು, ಅನೈರ್ಮಲ್ಯ ಶೌಚಾಲ ಯಗಳಿಂದ ಹೊರ ಹೋಗಿ ತೆರೆದ ಚರಂಡಿಗಳಲ್ಲಿ ಸಂಗ್ರಹವಾಗುವ ಮಾನವ ಮಲವನ್ನು ಸ್ವಚ್ಛಗೊಳಿಸುವುದು ಮತ್ತು ಶೌಚಾಲಯದ ಮಲ ಗುಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡವರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ADVERTISEMENT

ಅರ್ಜಿದಾರರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಕುಟುಂಬದ ಸದಸ್ಯರನ್ನು ಒಳಗೊಂಡ ಭಾವಚಿತ್ರ (ಅಳತೆ:6*4), ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಮುಖ ಪುಟದ ಪ್ರತಿ, ಆಧಾರ್ ಪ್ರತಿ, ಸಫಾಯಿ ಕರ್ಮಚಾರಿ ಕಾರ್ಯನಿರ್ವಹಿಸುತ್ತಿರುವ ಅನೈರ್ಮಲ್ಯ ಶೌಚಾಲಯ ಸ್ಥಳದ ವಿವರವನ್ನು ಒಳಗೊಂಡ ದಾಖಲೆಗಳನ್ನು ಸ್ವಯಂಘೋಷಿತ ಅರ್ಜಿಯೊಂದಿಗೆ ಸಲ್ಲಿಸಬೇಕು.

ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಸ್ವೀಕೃತವಾದ ತಾತ್ಕಾಲಿಕ ಪಟ್ಟಿಯನ್ನು ಜಿಲ್ಲಾ ನೋಡಲ್ ಅಧಿಕಾರಿ ಪರಿಶೀಲಿಸಿ, ಕ್ರೋಢೀಕರಿಸಿ ಸಿದ್ಧಪಡಿಸಿದ ಪಟ್ಟಿ ಪ್ರಕಟಿಸುತ್ತದೆ. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳೊಳಗಾಗಿ ಜಿಲ್ಲಾ ನೋಡಲ್ ಅಧಿಕಾರಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸಮೀಕ್ಷೆ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಗ್ರಾ.ಪಂ. ಹಂತದಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು. ಸಮೀಕ್ಷೆ ನಡೆಯುವ ಸ್ಥಳ, ಕ್ಯಾಂಪ್ ಅಧಿಕಾರಿ ಹೆಸರು, ದಿನಾಂಕ, ಸಮಯ ಮತ್ತು ಕ್ಯಾಂಪ್‌ಗೆ ಒಳಪಡುವ ಗ್ರಾ.ಪಂ. ವಿವರಗಳನ್ನು ಟಂಟಂ, ಕರಪತ್ರ ವಿತರಣೆ, ಆಟೊ ಮೂಲಕ ಪ್ರಚಾರ, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಪೋಸ್ಟರ್ ಅಳವಡಿಕೆ ಸೇರಿದಂತೆ ಇನ್ನಿತರೆ ಚಟುವಟಿಕೆಗಳ ಮೂಲಕ ಪ್ರಚಾರ ನೀಡುವಂತೆ ಸಿಇಒ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.