ADVERTISEMENT

ಭೂ ಒಡೆತನ ಯೋಜನೆ; ಸಮಗ್ರ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2023, 12:55 IST
Last Updated 2 ಜುಲೈ 2023, 12:55 IST

ಕೊಪ್ಪಳ: ಜಿಲ್ಲೆಯಲ್ಲಿ ಭೂ ಒಡೆತನ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಭೂಮಿ ಒದಗಿಸಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದುವರೆಗೂ ನಿಜವಾದ ಫಲಾನುಭವಿಗಳಿಗೆ ಭೂಮಿ ನೀಡಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಎನ್‌. ಮೂರ್ತಿ ಸ್ಥಾಪಿತ) ರಾಜ್ಯ ಸಮಿತಿ ನಿರ್ದೇಶಕ ಬಿ. ಜ್ಞಾನಸುಂದರ ಮತ್ತು ರಾಜ್ಯ ಕಾರ್ಯದರ್ಶಿ ರಾಮಣ್ಣ ಕಂದಾರಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧಿಕಾರಿಗಳು ಎಷ್ಟು ಜನರಿಗೆ ಭೂಮಿ ವಿತರಿಸಿದ್ದಾರೆ. ವಿತರಿಸಿದ ಭೂಮಿ ಫಲಾನುಭವಿಗಳ ಒಡೆತನದಲ್ಲಿದೆಯೋ ಇಲ್ಲವೋ ಎನ್ನುವುದನ್ನು ಖಾತರಿಪಡಿಸಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಬಹಳಷ್ಟು ಕೆಲಸಗಳು ದಲ್ಲಾಳಿಗಳ ಮೂಲಕ ನಡೆಯುವ ಸಂಶಯವಿದ್ದು, ನಿಜವಾದ ಫಲಾನುಭವಿಗಳಿಗೆ ಇದುವರೆಗೂ ಭೂಮಿ ಹಂಚಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

‘ಇಂಥ ಪ್ರಕರಣಗಳ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡುವುದರ ಬಗ್ಗೆ ಸುಳಿವು ನೀಡಿದ್ದು, ಅದರಂತೆ ಕೊಪ್ಪಳ ಜಿಲ್ಲೆಗೆ ವಿಶೇಷ ತನಿಖೆ ತಂಡ ರಚಿಸಿ ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.