ಗಂಗಾವತಿ: ತಾಲ್ಲೂಕಿನ ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ ಸೇರಿ ಕೊಪ್ಪಳದ ಬಸಾಪುರ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ರೆಸಾರ್ಟ್, ಹೋಂಸ್ಟೇಗಳ ವಿರುದ್ದ ಕಠಿಣಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣದ) ಸದಸ್ಯರು ಸೋಮವಾರ ಡಿವೈಎಸ್ಪಿ ಸಿದ್ದಲಿಂಗಪ್ಪ ಪೊಲೀಸ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ‘ಅಂಜನಾದ್ರಿ ಭಾಗದಲ್ಲಿ ಸ್ಥಳೀಯರು ಅಕ್ರಮ ರೆಸಾರ್ಟ್, ಹೋಂಸ್ಟೇಗಳು ನಿರ್ಮಿಸಿಕೊಂಡು ಅನೈತಿಕ ಚಟುವಟಿಕೆಗಳು ನಡೆಸುತ್ತ, ಪ್ರವಾಸಿಗರಿಂದ ಅಧಿಕ ಹಣ ವಸೂಲಿಯುತ್ತಿದ್ದಾರೆ. ಪ್ರವಾಸಿಗಳ ರಕ್ಷಣೆಗೆ ರೆಸಾರ್ಟ್ ಮಾಲೀಕರಲ್ಲಿ ವ್ಯವಸ್ಥೆ ಇಲ್ಲ. ಸಾಣಾಪುರ ಭಾಗ ಡ್ರಗ್ ಮಾಫಿಯಾಕ್ಕೆ ಹೆಸರು ವಾಸಿಯಾದ ರೀತಿಯಲ್ಲಿ ಅವಗಡಗಳು ಸಂಭವಿಸಿ ಪ್ರಕರಣಗಳು ದಾಖಲಾಗುತ್ತಿದೆ’ ಎಂದು ಆರೋಪಿಸಿದರು.
ಸಂಘಟನೆ ತಾಲ್ಲೂಕು ಉಪಾಧ್ಯಕ್ಷ ಬಸವರಾಜ ನಾಯಕ ಮಾತನಾಡಿ, ‘ಮೂರ್ನಾಲ್ಕು ವರ್ಷಗಳ ಹಿಂದೆ ಅಕ್ರಮ ರೆಸಾರ್ಟ್‌ಗಳ ತಾಣ ವಿರೂಪಾಪುರ ಗಡ್ಡೆಯನ್ನು ಜಿಲ್ಲಾಡಳಿತ ನೆಲಸಮ ಮಾಡಿ, ಅನೈತಿಕ ಚಟುವಟಿಕೆಗಳ ವ್ಯವಹಾರಕ್ಕೆ ಕಡಿವಾಣ ಹಾಕಿತ್ತು. ಕೆಲ ಪ್ರಭಾವಿಗಳು ಬಡರೈತರ ಭೂಮಿಯನ್ನು ಗುತ್ತಿಗೆ ಪಡೆದು, ಅಕ್ರಮ ರೆಸಾರ್ಟ್ ಹೋಂಸ್ಟೇ ನಿರ್ಮಿಸಿ, ಮತ್ತೆ ಅವ್ಯವಹಾರ ಆರಂಭಿಸಿದ್ದಾರೆ’ ಎಂದು ಆರೋಪಿಸಿದರು.
‘ಈಚೆಗೆ ವಿದೇಶ ಮತ್ತು ಸ್ಥಳೀಯ ಹೋಂ ಸ್ಟೇ ಒಡತಿ ಮೇಲೆ ಅತ್ಯಾಚಾರ, ಓರ್ವ ವ್ಯಕ್ತಿಯ ಕೊಲೆ ಘಟನೆ ನಡೆದಿದೆ. ಕೃತ್ಯವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸಾಣಾಪುರ ಭಾಗದ ನದಿಪಾತ್ರಗಳಲ್ಲಿ ಅಕ್ರಮ ಮದ್ಯ, ಗಾಂಜಾ ಮಾರಾಟ ಹೆಚ್ಚಾಗಿರುವ ಬಗ್ಗೆ ಮಾಹಿತಿ ಬರುತ್ತಿದೆ. ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕು’ ಆಗ್ರಹಿಸಿದರು.
ಸಂಘಟನೆ ಗ್ರಾಮೀಣ ಘಟಕದ ಅಧ್ಯಕ್ಷ ಮುತ್ತು ಈಳಿಗೇರ ಮಾತನಾಡಿ, ‘ಸಾಣಾಪುರ, ಆನೆಗೊಂದಿ, ಮಲ್ಲಾಪುರ, ಬಸಾಪುರ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ನೈಟ್ ಪಾರ್ಟಿ, ಸಂಚಾರ, ಬೊನ್‌ಪೈರ್, ಜೂಜು ಚಟುವಟಿಕೆಗಳು ಹೆಚ್ಚಾಗಿದ್ದು, ಇವುಗಳಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಮಹಿಳಾ ಅಧ್ಯಕ್ಷೆ ಭಾರತಿ ಆಗಳೂರು, ತಾಲ್ಲೂಕು ಅಧ್ಯಕ್ಷೆ ಈರಮ್ಮ, ರಾಜೇಶ್ವರಿ, ವಿಜಯಲಕ್ಷ್ಮಿ, ಮೋಹನ್ ಬಾಬು, ಶಿವಾನಂದ, ಧನರಾಜ, ಕೃಷ್ಣ ಚಂದ್ರಗಿರಿ, ಪುಂಡಲಿಕ, ವೆಂಕಟೇಶ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.