ADVERTISEMENT

ಕಳ್ಳನ ಬಂಧನ: ₹8.37 ಲಕ್ಷ ಮೊತ್ತದ ಆಭರಣ ವಶ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 6:00 IST
Last Updated 28 ಏಪ್ರಿಲ್ 2021, 6:00 IST
ಪಂಪಣ್ಣ ಯಮನೂರಪ್ಪ ಭೂತನವರ
ಪಂಪಣ್ಣ ಯಮನೂರಪ್ಪ ಭೂತನವರ   

ಕಾರಟಗಿ: ಜಿಲ್ಲೆಯ ಎರಡು ಕಡೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಆತನಿಂದ ₹8.37 ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ ಮೊಬೈಲ್‌ ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಜರುಗಿದೆ.

ಯಲಬುರ್ಗಾ ತಾಲ್ಲೂಕು ಪುಟಗಮರಿ ಗ್ರಾಮದ ಪಂಪಣ್ಣ ಯಮನೂರಪ್ಪ ಭೂತನವರ ಬಂಧಿತ ಆರೋಪಿ.

ಆರೋಪಿಯು ಏ. 19ರಂದು ಜೆಪಿ ನಗರದ ರಾಯಪ್ಪ ನಾಯಕ ನಿವಾಸದಲ್ಲಿ ಕಳ್ಳತನವೆಸಗಿ 9.5 ತೊಲೆಯ ಚಿನ್ನದ ಆಭರಣಗಳನ್ನು ಮತ್ತು ಯಲಬುರ್ಗ ತಾಲ್ಲೂಕು ಪುಟಗಮರಿ ಗ್ರಾಮದ ಸತ್ಯನಾರಾಯಣ ಗುಡಿ ಎಂಬುವವರ ನಿವಾಸದಲ್ಲಿ 2020ರ ಆಗಸ್ಟ್‌ ತಿಂಗಳಲ್ಲಿ 8 ತೊಲೆ ಚಿನ್ನದ ಆಭರಣಗಳನ್ನು ಕದ್ದಿದ್ದನು ಎಂದು ಮೂಲಗಳು
ತಿಳಿಸಿವೆ.

ADVERTISEMENT

ಎರಡೂ ಕಡೆಯ ಕೃತ್ಯದ ಶಂಕೆ ಯನ್ನು ಗಮನಿಸಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ, ಗಂಗಾವತಿ ಡಿವೈಎಸ್ಪಿ ಆರ್.‌ಎಸ್.‌ ಉಜ್ಜನಿಕೊಪ್ಪ, ಗಂಗಾವತಿ ಗ್ರಾಮೀಣ ಠಾಣಾ ಇನ್‌ಸ್ಪೆಕ್ಟರ್‌ ಉದಯರವಿ, ಕಾರಟಗಿ ಸಬ್‌ ಇನ್‌ಸ್ಪೆಕ್ಟರ್‌ ಲಕ್ಕಪ್ಪ ಬಿ.ಅಗ್ನಿ ಮತ್ತು ಸಿಬ್ಬಂದಿಯ ತಂಡ ರಚಿಸಿ, ಪ್ರಕರಣದ ತನಿಖೆಗೆ ಸೂಚಿಸಿದ್ದರು.

ಪೊಲೀಸರ ಶಂಕೆಗೀಡಾಗಿದ್ದ ಆರೋಪಿ ಪಂಪಣ್ಣ, ಪಟ್ಟಣದ ತಮ್ಮ ಸಂಬಂಧಿಗಳ ನಿವಾಸಕ್ಕೆ ಆಗಮಿಸಿದ್ದಾಗ ಬಲೆ ಬೀಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ತಪ್ಪೊಪ್ಪಿಕೊಂಡ ಆರೋಪಿಯಿಂದ ಪೊಲೀಸರು ₹8.37 ಲಕ್ಷ ಬೆಲೆ ಬಾಳುವ 17. 5 ತೊಲೆಯ ಚಿನ್ನದ ಆಭರಣಗಳನ್ನು ಹಾಗೂ ಒಂದು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾ ಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.