ADVERTISEMENT

ಕರಡು ಸಮಗ್ರ ಕ್ರಿಯಾ ಯೋಜನೆ ಸಿದ್ಧ; ಶಾಸಕ ಹಿಟ್ನಾಳ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 8:03 IST
Last Updated 7 ಡಿಸೆಂಬರ್ 2025, 8:03 IST
ಕೊಪ್ಪಳದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿದರು
ಕೊಪ್ಪಳದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿದರು   

ಕೊಪ್ಪಳ: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಅನುದಾನ ಒಳಗೊಂಡಂತೆ ನಗರ ಮತ್ತು ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿ ಮುನ್ನೋಟ ತಯಾರಿಸಲು ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ ಮಹತ್ವವಾಗುತ್ತದೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಗ್ರಾಮ ಸ್ವರಾಜ್ ಕಲ್ಪನೆಯಂತೆ ಹಳ್ಳಿಯಿಂದ ಯೋಜನೆ ರೂಪುಗೊಳ್ಳಲು ವಾರ್ಡ್ ಸಭೆ ಮತ್ತು ಗ್ರಾಮಸಭೆಗಳು ಪೂರಕವಾಗಿದ್ದು, ಅಧಿಕಾರಿಗಳು ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮಸಭೆಯಲ್ಲಿ ಬಂದ ಕಾಮಗಾರಿಗಳ ಪ್ರಸ್ತಾವವನ್ನು ತಾಲ್ಲೂಕು ಯೋಜನೆ ಮತ್ತು ಅಭಿವೃದ್ದಿ ಸಮಿತಿ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಸಮಿತಿಗೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

‘ಈಗಾಗಲೇ 2026-27ನೇ ಸಾಲಿನ ₹468 ಕೋಟಿ ಮೊತ್ತದ ಕಾಮಗಾರಿಗಳ ಪ್ರಸ್ತಾವ ತಯಾರಿಸಲಾಗಿದ್ದು, ಸಭೆಯಲ್ಲಿ ಚರ್ಚಿಸಿ ಆದ್ಯತೆ ಮೇರೆಗೆ ಅನುಮೋದನೆಗೆ ಕಳುಹಿಸಲಾಗುವುದು. ಮುಂಬರುವ ಆರ್ಥಿಕ ಸಾಲಿನಲ್ಲಿ ಅನುಮೋದನೆಗೊಂಡ ಕಾಮಗಾರಿ ಅನುಷ್ಠಾನದಲ್ಲಿ ಯಾವುದೇ ವಿಳಂಬ ಮಾಡಬಾರದು. ಯಾವುದೇ ಕಾಮಗಾರಿ ವಾಪಸ್‌ ಹೋಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಮಾತನಾಡಿ ‘ಗ್ರಾಮೀಣ ಮತ್ತು ನಗರದ ಸರ್ವತೋಮುಖ ಅಭಿವೃದ್ಧಿಗೆ ಅಭಿವೃದ್ಧಿ ಸಮಿತಿ ನೆರವಾಗಿದ್ದು, ವಿವಿಧ ಇಲಾಖೆಗಳ ಅನುದಾನ ಪಡೆಯಲು ಪ್ರಸ್ತಾವ ಸಿದ್ಧಪಡಿಸಲಾಗಿದೆ’ ಎಂದರು.

ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ರಾಮಣ್ಣ ಕಲ್ಲಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಹನಮಂತಪ್ಪ, ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ತಾಲ್ಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್, ಪಂಚಾಯತರಾಜ್‌ ಸಹಾಯಕ ನಿರ್ದೇಶಕ ಮಹೇಶ್‌ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.