
ಕೊಪ್ಪಳ: ‘ರಾಜ್ಯದಲ್ಲಿರುವ ಡ್ರಗ್ಸ್ ಕಾರ್ಖಾನೆಗಳನ್ನು ಬೇರೆ ರಾಜ್ಯಗಳ ಪೊಲೀಸರು ಪತ್ತೆ ಹಚ್ಚುತ್ತಿದ್ದು, ಇದು ರಾಜ್ಯದ ಪೊಲೀಸರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ತಮ್ಮ ಜವಾಬ್ದಾರಿಯುತ ಸ್ಥಾನ ನಿರ್ವಹಿಸಲು ವಿಫಲರಾಗಿರುವ ಗೃಹ ಸಚಿವ ಜಿ. ಪರಮೇಶ್ವರ ಅವರು ಗೃಹಖಾತೆ ತೊರೆಯಬೇಕು’ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಪೊಲೀಸ್ ಅಧಿಕಾರಿಗಳ ಬೆಂಬಲವಿಲ್ಲದೇ ಮಾದಕ ವಸ್ತುಗಳ ಜಾಲ ಇರಲು ಸಾಧ್ಯವಿಲ್ಲ. ಅವರಿಗೆ ಮೊದಲೇ ಮಾಹಿತಿ ಗೊತ್ತಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಬೆಂಗಳೂರಿನಲ್ಲಿರುವಂತೆಯೇ ಕೊಪ್ಪಳ ಜಿಲ್ಲೆಯಲ್ಲಿಯೂ ಡ್ರಗ್ಸ್ ಮಾರಾಟ ಅವ್ಯಾವಾಹತವಾಗಿದೆ. ಜಿಲ್ಲೆಯ ಪೊಲೀಸರು ಕೂಡ ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ’ ಎಂದು ಆರೋಪಿಸಿದರು.
‘ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಮದ್ಯ ಕುಡಿಯುವವರಿಗೆ ಪ್ರೋತ್ಸಾಹ ನೀಡುತ್ತಿದೆ. ಹೊಸವರ್ಷಾಚರಣೆ ವೇಳೆ ಕುಡಿದು ಬಿದ್ದವರಿಗೆ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುವುದು ಎಂದು ಸರ್ಕಾರ ಹೇಳಿದ್ದು, ಕುಡಿಯುವವರಿಗೆ ಉತ್ತೇಜನ ನೀಡಿದಂತಾಗಿದೆ. ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಜೂಜಾಟದ ಹಾವಳಿ ವ್ಯಾಪಕವಾಗಿದ್ದು, ಯಲಬುರ್ಗಾ ಭಾಗದಲ್ಲಿ ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ. ಅದಕ್ಕಾಗಿ ಆ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಧನ್ಯವಾದ ಹೇಳುವೆ’ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಪಕ್ಷದ ಮುಖಂಡರಾದ ನೀಲಕಂಠಯ್ಯ ಹಿರೇಮಠ, ಮಹೇಶ ಹಾದಿಮನಿ ಹಾಗೂ ಪ್ರಸಾದ ಗಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.