ಕುಷ್ಟಗಿ: ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿದ ಮಳೆಗೆ ತಾಲ್ಲೂಕಿನ ಶಿರಗುಂಪಿ ಗ್ರಾಮದಲ್ಲಿನ ಅನೇಕ ಮನೆಗಳ ತಳದಲ್ಲಿ ನೀರು ಜಿನುತ್ತಿರುವುದರಿಂದ ಮನೆಗಳು ಶಿಥಿಲಗೊಂಡಿದ್ದು ಕುಟುಂಬಗಳು ಅಪಾಯಕ್ಕೆ ಸಿಲುಕಿರುವುದು ಗೊತ್ತಾಗಿದೆ.
ಈ ಭಾಗದಲ್ಲಿ ಅತಿಯಾಗಿ ಮಳೆಯಾಗಿರುವುದು ಹಳ್ಳ,ಕೊಳ್ಳಗಳು ತುಂಬಿ ಹರಿದಿದ್ದು ಅಂತರ್ಜಲ ಹೆಚ್ಚಾಗಿದೆ. ಹಾಗಾಗಿ ತಗ್ಗುಪ್ರದೇಶದಲ್ಲಿರುವ ವಾಸಿಸುತ್ತಿರುವ ಐದಾರು ಕುಟುಂಬಗಳ ಮನೆಗಳ ತಳದಿಂದ ನೀರು ನಿರಂತರವಾಗಿ ಜಿನುಗುತ್ತಿದೆ. ಮನೆಯವರು ನೀರನ್ನು ಮೋಟರ್‌ಪಂಪ್ ಮೂಲಕ ಹೊರಹಾಕುತ್ತಿದ್ದಾರೆ. ಆದರೂ ಜಿನುಗುವಿಕೆ ಕಡಿಮೆಯಾಗಿಲ್ಲ. ಮಣ್ಣಿನ ಮನೆಗಳಾಗಿದ್ದು ಗೋಡೆಗಳು ತೇವಗೊಂಡಿವೆ ಎಂದು ತಿಳಿಸಲಾಗಿದೆ.
ಮನೆಯಲ್ಲಿ ವೃದ್ಧರು, ಮಕ್ಕಳು ವಾಸಿಸುತ್ತಿದ್ದು ಕೂಡಲು, ಮಲಗುವುದಕ್ಕೂ ಸಾಧ್ಯವಾಗಿಲ್ಲ, ಸದಾ ತೇವಗೊಂಡ ಮನೆಯಲ್ಲಿಯೇ ಉಳಿದುಕೊಂಡಿದ್ದು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ತಾತ್ಕಾಲಿಕವಾಗಿಯಾದರೂ ಪರ್ಯಾಯ ಪುನರ್ವಸತಿ ಕಲ್ಪಿಸುವಂತೆ ಗ್ರಾಮ ಪಂಚಾಯಿತಿ ಇತರೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತು ಆ.14 ರಂದು ಸಮಸ್ಯೆ ಸಿಲುಕಿರುವ ಕುಟುಂಬಗಳಿಗೆ ಸೇರಿದ ನಿರ್ಮಲಾ, ಗೀತಾ, ಹಂಪಮ್ಮ, ಹನುಮಂತಿ ಇತರರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ; ನೋಟಿಸ್! ಪರ್ಯಾಯ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದ ಸಂತ್ರಸ್ತರಿಗೆ ಶಿರಗುಂಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆ.13 ರಂದು ನೋಟಿಸ್ ನೀಡಿದ್ದು ‘ನಿಮ್ಮ ಮನೆಗಳು ಶಿಥಿಲಗೊಂಡಿದ್ದು ಯಾವುದೇ ಸಮಯದಲ್ಲಿ ಬೀಳುವ ಸ್ಥಿತಿಯಲ್ಲಿವೆ.
ಹಾಗಾಗಿ ತಕ್ಷಣ ಸ್ಥಳಾಂತರಗೊಂಡು ಮಾರುತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಾಸಿಸಬೇಕು. ಒಂದು ವೇಳೆ ನೀವು ಮನೆಯಲ್ಲಿಯೇ ಉಳಿದುಕೊಂಡು ನಿಮ್ಮ ಜೀವಕ್ಕೆ ಹಾನಿಯಾದರೆ ನೀವೇ ಜವಾಬ್ದಾರರು’ ಎಂದು ನೋಟಿಸ್‌ನಲ್ಲಿ ಸ್ಪಷ್ಪಡಿಸಿದ್ದಾರೆ. ನೋಟಿಸ್‌ನಿಂದ ಬೇಸರಗೊಂಡ ಸಂತ್ರಸ್ತರು ತಾವು ಐದಾರು ಕುಟುಂಬದವರಿದ್ದು ಒಂದೇ ಸ್ಥಳದಲ್ಲಿ ಇರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಳೆಗಾಲ ಮುಗಿಯುವವರೆಗೂ ತಗಡಿನ ಶೀಟ್‌ಗಳ ಶೆಡ್ ನಿರ್ಮಿಸಬೇಕು ಮತ್ತು ಅಗತ್ಯವಸ್ತುಗಳನ್ನು ನೀಡುವಂತೆ ಮನವಿ ಮಾಡಿದರೆ ಬೇಜವಾಬ್ದಾರಿಯಿಂದ ನೋಟಿಸ್ ನೀಡಿದ್ದಾರೆ ಎಂದು ತಹಶೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.