ADVERTISEMENT

ಕೊಪ್ಪಳ: ಏಕಾಏಕಿ ದನಗಳ ಸಾವು, ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 13:23 IST
Last Updated 15 ನವೆಂಬರ್ 2022, 13:23 IST
ಕೊಪ್ಪಳದ ಜಿಲ್ಲಾಡಳಿತ ಭವನದ ಎದುರು ಸತ್ತ ರಾಸುಗಳನ್ನು ತಂದು ಆಕ್ರೋಶ ವ್ಯಕ್ತಪಡಿಸಿದ ರೈತರು –ಪ್ರಜಾವಾಣಿ ಚಿತ್ರ
ಕೊಪ್ಪಳದ ಜಿಲ್ಲಾಡಳಿತ ಭವನದ ಎದುರು ಸತ್ತ ರಾಸುಗಳನ್ನು ತಂದು ಆಕ್ರೋಶ ವ್ಯಕ್ತಪಡಿಸಿದ ರೈತರು –ಪ್ರಜಾವಾಣಿ ಚಿತ್ರ   

ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಹಾಗೂ ಕಾಮನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಒಂದು ವಾರದಿಂದ ದನಗಳು ಏಕಾಏಕಿ ಮೃತಪಡುತ್ತಿದ್ದರೂ ವೈದ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದ ರೈತರು ಸತ್ತ ದನಗಳನ್ನು ತಂದು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದ ಬಹುತೇಕ ಕಡೆ ಈಗ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಡುತ್ತಿದೆ. ಇದಕ್ಕೆ ಲಸಿಕೆ ನೀಡುವಲ್ಲಿ ಪಶುಪಾಲನಾ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಇದರ ನಡುವೆ ಸಂಚಾರಿ ದನಗಳ ಹಿಂಡಿನಲ್ಲಿನ ರಾಸುಗಳು ಸಾಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರೋಗದ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಏಕಾಏಕಿ ಕುಸಿದು ಮೃತಪಡುತ್ತಿವೆ. ಒಂದು ವಾರದ ಅವಧಿಯಲ್ಲಿ 15ರಿಂದ 20 ರಾಸುಗಳು ಪ್ರಾಣಬಿಟ್ಟಿವೆ ಎಂದು ಅವುಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ತಕ್ಷಣವೇ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೃತಪಟ್ಟ ರಾಸುಗಳನ್ನು ಆಟೊದಲ್ಲಿ ಹಾಕಿಕೊಂಡು ಬಂದ ಹನುಮೇಶಪ್ಪ ಜಂತ್ಲಿ ಎಂಬುವವರು ಅವುಗಳನ್ನು ಜಿಲ್ಲಾಡಳಿತ ಭವನದ ಮುಂದೆ ಹಾಕಿದರು. ಬಳಿಕ ಬಳ್ಳಾರಿ ಪ್ರಯೋಗಾಲಯದಿಂದ ತಂತ್ರಜ್ಞರನ್ನು ಕರೆಸಿ ಮೃತ ಜಾನುವಾರುಗಳ ಮರೋಣತ್ತರ ಪರೀಕ್ಷೆ ಕೈಗೊಳ್ಳಲಾಯಿತು.

ADVERTISEMENT

ತಪಾಸಣೆಗೆ ಕ್ರಮ: ಸತ್ತ ರಾಸುಗಳ ಸ್ಥಳಕ್ಕೆ ಬಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್. ನಾಗರಾಜ ‘ಜಿಲ್ಲೆಯಲ್ಲಿ ಅಂದಾಜು 28,000 ಸಂಚಾರಿ ದನಗಳು ಇದ್ದು, ಇರಕಲ್ಲಗಡ ಹೋಬಳಿಯ ಹಲವು ಗ್ರಾಮಗಳಲ್ಲಿ ಕೆಲವು ರೈತರು ಹಿಂಡುಗಳಲ್ಲಿ ದನಗಳನ್ನು ಸಾಕುತ್ತಾರೆ. ಈಗಾಗಲೇ ಸಂಚಾರಿ ದನಗಳ ಹಿಂಡುಗಳಲ್ಲಿನ ಜಾನುವಾರುಗಳ ಆರೋಗ್ಯ ಪರೀಕ್ಷೆ ಮತ್ತು ಅಗತ್ಯ ಚಿಕಿತ್ಸೆಗಾಗಿ ಪಶುವೈದ್ಯಾಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ‘ ಎಂದು ಹೇಳಿದರು.

*
ದನಗಳು ಏಕಾಏಕಿ ಯಾಕೆ ಸಾಯುತ್ತಿವೆ ಎನ್ನುವುದಕ್ಕೆ ಕಾರಣ ಗೊತ್ತಾಗುತ್ತಿಲ್ಲ. ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಗಮನಿಸುತ್ತಿಲ್ಲ. ದನಗಳೇ ನಮ್ಮ ಆಸ್ತಿ. ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಕೊಡಬೇಕು.
-ಹನುಮೇಶಪ್ಪ ಜಂತ್ಲಿ, ಮೃತ ದನಗಳ ಮಾಲೀಕ

*
ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟಿಲ್ಲ. ಸದ್ಯ ಮೃತ ರಾಸುಗಳ ಮಾದರಿ ಪಡೆದಿದ್ದು, 24 ಗಂಟೆಯೊಳಗೆ ಪ್ರಯೋಗಾಲಯ ವರದಿ ಬರಲಿದೆ. ಬಂದ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
-ಡಾ.ಎಚ್.ನಾಗರಾಜ. ಪಶುಪಾಲನಾ ಇಲಾಖೆ ಡಿಡಿ ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.