ADVERTISEMENT

ಕೊಪ್ಪಳ | ಪಿಯುಸಿ ಪರೀಕ್ಷೆಯಲ್ಲಿ ಅಪ್ಪ – ಮಗ ಒಟ್ಟಿಗೆ ಪಾಸ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 4:38 IST
Last Updated 21 ಜೂನ್ 2022, 4:38 IST
ಪ್ರಾಣೇಶ ಮಹೇಂದ್ರಕರ್ ಹಾಗೂ ಮಗ ವಿನಾಯಕ
ಪ್ರಾಣೇಶ ಮಹೇಂದ್ರಕರ್ ಹಾಗೂ ಮಗ ವಿನಾಯಕ   

ಕೊಪ್ಪಳ: ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಪ್ಪ ಹಾಗೂ ಮಗ ಒಟ್ಟಿಗೆ ಪಾಸಾಗಿದ್ದಾರೆ. ವಿಶೇಷವೆಂದರೆ 22 ವರ್ಷಗಳ ಬಳಿಕ ಪರೀಕ್ಷೆ ಕಟ್ಟಿದ ಅಪ್ಪ ಮಗನಿಗಿಂತಲೂ ಒಟ್ಟು ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಕೊಪ್ಪಳ ನಗರಸಭೆ ಮಾಜಿ ಸದಸ್ಯ ಪ್ರಾಣೇಶ ಮಹೇಂದ್ರಕರ್ 1999ರಲ್ಲಿ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಶಿಕ್ಷಣ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದಿದ್ದರು. ಇಂಗ್ಲಿಷ್‌ ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳನ್ನು ಉತ್ತೀರ್ಣರಾಗಿದ್ದರು. 2000ರಲ್ಲಿ ಮರು ಪರೀಕ್ಷೆ ಕಟ್ಟಿದ್ದರೂ ಪಾಸ್‌ ಆಗಿರಲಿಲ್ಲ. ಹೀಗಾಗಿ ಪ್ರಯತ್ನವನ್ನೇ ಕೈ ಬಿಟ್ಟಿದ್ದರು.

ಪ್ರಾಣೇಶ ಅವರ ಪುತ್ರ ವಿನಾಯಕ ಈಗ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದಾನೆ. ಮಗನೊಂದಿಗೆ ಪರೀಕ್ಷೆ ಕಟ್ಟಿದ ಪ್ರಾಣೇಶ್ ಇಂಗ್ಲಿಷ್‌ನಲ್ಲಿ 40 ಅಂಕಗಳನ್ನು ಗಳಿಸಿದ್ದಾರೆ. ಇವರು ಒಟ್ಟು 344 ಮತ್ತು ಮಗ 333 ಅಂಕಗಳನ್ನು ಪಡೆದಿದ್ದಾರೆ.

ADVERTISEMENT

‘22 ವರ್ಷಗಳ ಹಿಂದೆ ಇಂಗ್ಲಿಷ್‌ ಪರೀಕ್ಷೆಯಲ್ಲಿ ಅನುತ್ತೀರ್ಣನಾದಾಗ ಮತ್ತೆ ಬರೆಯವುದೇ ಬೇಡ ಎಂದು ಸುಮ್ಮನಾಗಿದ್ದೆ. ಒಮ್ಮೆ ಮಾಡಿದ್ದ ಪ್ರಯತ್ನಕ್ಕೆ ಫಲ ಲಭಿಸಿರಲಿಲ್ಲ. ಮೊದಲು ನನಗೆ ನಾನು ಫೇಲಾದೆ ಎನ್ನುವ ಭಾವನೆಯಿತ್ತು. ಇದರಿಂದ ಮಕ್ಕಳಲ್ಲಿ ಕೀಳರಿಮೆ ಭಾವನೆ ಶುರುವಾಗುತ್ತದೆ. ಅದನ್ನು ಹೋಗಲಾಡಿಸಲು ಇದು ನನ್ನ ಸಣ್ಣ ಪ್ರಯತ್ನ‘ ಎಂದುಪ್ರಾಣೇಶ ಹೇಳಿದರು.

‘ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕಗಳು ಬಂದವು, ಅನುತ್ತೀರ್ಣನಾದೆ ಎನ್ನುವ ಕಾರಣಕ್ಕೆ ಅನೇಕ ಯುವಕ ಯುವತಿಯರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಪ್ರೇರಣೆ ತುಂಬುವ ಸಲುವಾಗಿಯೇ ನಾನು ಪರೀಕ್ಷೆ ಪಾಸ್‌ ಆದ ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದೇನೆ. ಪ್ರಯತ್ನ ಪಟ್ಟರೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ನಾನೇ ಸಾಕ್ಷಿ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.