ಗಂಗಾವತಿ: ‘ಜೈವಿಕ ಬಲವರ್ಧಿತ ಶಕ್ತಿಯುಳ್ಳ ಸ್ಪೂರ್ತಿ ಭತ್ತದ ತಳಿ ಅಕ್ಕಿ ಸೇವನೆಯಿಂದ ಮನುಷ್ಯನ ದೇಹಕ್ಕೆ ಹೆಚ್ಚಿನ ಪೋಷಕಾಂಶ ಸಿಗಲಿವೆ. ರೈತರು ಸ್ಪೂರ್ತಿ ಭತ್ತದ ಬೆಳೆಯಲು ಹೆಚ್ಚಿನ ಆಸಕ್ತಿ ತೋರಬೇಕು’ ಎಂದು ಕೃಷಿ ವಿಜ್ಞಾನ ಕೇಂದ್ರದ ಭತ್ತದ ತಳಿಶಾಸ್ತಜ್ಞ ಮಹಾಂತ ಶಿವಯೋಗಯ್ಯ ಹೇಳಿದರು.
ನಗರದ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ, ಗಂಗಾವತಿ ಕೃಷಿ ಸಂಶೋಧನಾ ಕೇಂದ್ರ, ಅಂತರರಾಷ್ಟ್ರೀಯ ಭತ್ತ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ನಡೆದ ರೈತರಿಗೆ ಸ್ಪೂರ್ತಿ ಭತ್ತದ ತಳಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಸದ್ಯ ಮನುಷ್ಯ ಬಾಯಿರುಚಿ ಆಸೆಗೆ, ಇಲ್ಲಸಲ್ಲದ ಆಹಾರ ಸೇವಿಸಿ, ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದೇನೆ. ಇಂದಿನ ತಿಂಡಿಗಳಲ್ಲಿ ಮಾನವ ದೇಹಕ್ಕೆ ಬೇಕಾಗುವ ಪೋಷಕಾಂಶವೇ ಸಿಗುತ್ತಿಲ್ಲ. ಈಗಿನ ಭತ್ತದ ತಳಿಗಳ ಅಕ್ಕಿಯಲ್ಲಿ ಪೋಷ ಕಾಂಶಗಳೇ ತುಂಬ ಕಡಿಮೆ ಕಾಣಬಹುದಾಗಿದೆ’ ಎಂದು ಹೇಳಿದರು.
‘ಆದರೆ ಸ್ಪೂರ್ತಿ ಭತ್ತದ ತಳಿಯ ಅಕ್ಕಿಯಲ್ಲಿ ಹಾಗಲ್ಲ, ಇದರಲ್ಲಿ ಹೆಚ್ಚಿನ ಪೋಷಕಾಂಶಗಳು ಕಾಣಬಹುದು. ಈ ತಳಿಯನ್ನು ಗಂಗಾವತಿ ಕೆವಿಕೆ ಕೇಂದ್ರದಲ್ಲಿ 8 ವರ್ಷಗಳ ಕಾಲ ಸಂಶೋಧನೆ ನಡೆಸಿ, ಕಂಡು ಹಿಡಿಯಲಾಗಿದೆ. ಈ ತಳಿ ನಾಟಿ ಮಾಡಿದ ನಂತರ 125-130 ದಿನಗಳಿಗೆ ಕಟಾವಿಗೆ ಬರುತ್ತದೆ. ಮುಂಗಾರಿಗೆ ಇದು ಉತ್ತಮ ಬೆಳೆ. ಈ ತಳಿಯನ್ನು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಬೆಳೆಯಬಹುದಾಗಿದೆ’ ಎಂದರು.
ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ ವಿಜ್ಞಾನಿ ಬಿ.ವಿ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು.
ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ವಿಜ್ಞಾನಿ ಅನಂತ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಜೆ.ಎಂ. ನಿಡಗುಂದಿ, ಅಮರೇಗೌಡ, ಅರುಣಕುಮಾರ ಹೊಸಮನಿ, ಬಸವಣೆಪ್ಪ, ಸುಜಯ್ ಹುರಳಿ, ಶ್ವೇತಾ, ಇಮ್ತಿಯಾಜ್ ಸೇರಿ ರೈತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.