
ಗಂಗಾವತಿ: ನಿವೇಶನಗಳಿಗೆ ಸಲ್ಲಿಸಿದ ಅರ್ಜಿಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷಾ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ, ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಕಾರ್ಯಕರ್ತರು ನಗರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎ.ಎಲ್. ತಿಮ್ಮಣ್ಣ ಮಾತನಾಡಿ,‘ಗಂಗಾವತಿ ನಗರದಲ್ಲಿ ಸಾವಿರಾರು ಕುಟುಂಬಗಳಿಗೆ ಸ್ವಂತ ಸೂರು ಇಲ್ಲ. ಈಗಲೂ ಬಾಡಿಗೆ ಮನೆಗಳಲ್ಲಿ ಬದುಕುತ್ತಿದ್ದಾರೆ. ಈ ವಸತಿರಹಿತರು ಹಾಗೂ ನಿವೇಶನ ರಹಿತರು ಸಮಿತಿ ರಚನೆ ಮಾಡಿಕೊಂಡು ರಾಜೀವ್ ಗಾಂಧಿ ವಸತಿ ನಿಗಮದ ನಿವೇಶನ ಮತ್ತು ವಸತಿಗಾಗಿ ಕಳೆದ ನವಂಬರ್ ತಿಂಗಳಲ್ಲಿಯೇ ಅರ್ಜಿ ಸಲ್ಲಿಸಿದ್ದಾರೆ’ ಎಂದರು.
‘ಒಟ್ಟು 777ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿ, ರಾಜೀವ್ ಗಾಂಧಿ ವಸತಿ ನಿಗಮದ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷಾ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ವರ್ಷ ಉರುಳಿದರೂ ಈವರೆಗೆ ಸಮೀಕ್ಷಾ ಪಟ್ಟಿಗೆ ಸೇರಿಸಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣ. ಕೂಡಲೇ ಈ ಕಾರ್ಯ ಸರಿಯಾಗಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುತ್ತದೆ’ ಎಂದು ಆಗ್ರಹಿಸಿದರು.
ಸಂಘಟನೆಯ ಕಾರ್ಯಕರ್ತರಾದ ಶೇಖಮ್ಮ ಹೊಸಳ್ಳಿ, ಲಕ್ಷ್ಮಣನಾಯಕ, ತಾಯಮ್ಮ, ತಾಹೇರಾ ಬೇಗಂ, ಮಂಜುನಾಥ, ಗಂಗಮ್ಮ ಹೊಸಳ್ಳಿ, ನೂರಜಾನ್ ಬೇಗಂ ಸೇರಿ ವಸತಿರಹಿತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.