ಮಾರುತಿ ಕೊರಗಲ್
ಕೊಪ್ಪಳ: ಜಿಲ್ಲಾ ಕೇಂದ್ರದ ಸಮೀಪದ ಗಿಣಿಗೇರಾ ಹಾಗೂ ಅಲ್ಲಾನಗರ ಗ್ರಾಮಗಳ ಮಧ್ಯದಲ್ಲಿರುವ ಕಾಮಿನಿ ಇಸ್ಪಾತ್ (ಹೊಸಪೇಟೆ ಇಸ್ಪಾತ್ ಲಿಮಿಟೆಡ್) ಕಾರ್ಖಾನೆಯಲ್ಲಿ ಮಂಗಳವಾರ ಅನಿಲ ಸೋರಿಕೆಯಾಗಿದ್ದು ಒಬ್ಬ ಕಾರ್ಮಿಕ ಮೃತಪಟ್ಟಿದ್ದಾನೆ. ಹತ್ತು ಜನ ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಕಬ್ಬಿಣ ಮತ್ತು ಸ್ಪಾಂಜ್ ತಯಾರಿಕೆಯ ಕಾರ್ಖಾನೆಯ ಒಂದು ಘಟಕದಲ್ಲಿ ಹೊರಬೀಳುತ್ತಿದ್ದ ಬೂದಿಯನ್ನು ಸ್ವಚ್ಛಗೊಳಿಸಲು ಇಬ್ಬರು ಕಾರ್ಮಿಕರು ತೆರಳಿದ್ದರು. ಆಗ ಆ ಘಟಕ ಬಂದ್ ಆಗಿತ್ತು. ಅದರ ಪಕ್ಕದಲ್ಲಿಯೇ ಇದ್ದ ಇನ್ನೊಂದು ಘಟಕ ಕಾರ್ಯನಿರ್ವಹಿಸುತ್ತಿತ್ತು. ಆಗ ಸೋರಿಕೆಯಾದ ಅನಿಲದಿಂದಾಗಿ ಅಲ್ಲಾ ನಗರ ನಿವಾಸಿ ಮಾರುತಿ ಕೊರಗಲ್ (24) ಅಸ್ವಸ್ಥರಾಗಿ ಆಸ್ಪತ್ರೆಗೆ ಬರುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಇನ್ನೊಬ್ಬ ಕಾರ್ಮಿಕ ಮಹಾಂತೇಶ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
‘ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಬಂದ್ ಆಗಿದ್ದ ಘಟಕದಲ್ಲಿ ಮಾರುತಿ ಹಾಗೂ ಮಹಾಂತೇಶ ಅಸ್ವಸ್ಥರಾದರು. ಅವರು ಕಿರುಚಾಡಿದ್ದರಿಂದ ರಕ್ಷಣೆಗಾಗಿ ತೆರಳಿದ ಎಂಟು ಜನ ಕೂಡ ಅಸ್ವಸ್ಥರಾದರು’ ಎಂದು ಘಟನೆ ನಡೆದಾಗ ಕಾರ್ಖಾನೆಯ ಹೊರಭಾಗದಲ್ಲಿದ್ದ ಸಿಬ್ಬಂದಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಅಸ್ವಸ್ಥಗೊಂಡವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.