ADVERTISEMENT

ಗವಿಸಿದ್ಧೇಶ್ವರ ಜಾತ್ರೆ: ಕಣ್ಣು ಹಾಯಿಸಿದಲ್ಲೆಲ್ಲ ಜನವೋ, ಜನ...

ಅಜ್ಜನ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:28 IST
Last Updated 12 ಜನವರಿ 2026, 7:28 IST
ಕೊಪ್ಪಳದ ಗವಿಸಿದ್ಧೇಶ್ವರರ ಕರ್ತೃ ಗದ್ದುಗೆಯ ದರ್ಶನ ಪಡೆಯಲು ಸರತಿಯಲ್ಲಿ ನಿಂತಿರುವ ಭಕ್ತರು  ತೇರಿಗೆ ಕಾಯಿ ಒಡೆಸಿದ ಭಕ್ತರು  ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ
ಕೊಪ್ಪಳದ ಗವಿಸಿದ್ಧೇಶ್ವರರ ಕರ್ತೃ ಗದ್ದುಗೆಯ ದರ್ಶನ ಪಡೆಯಲು ಸರತಿಯಲ್ಲಿ ನಿಂತಿರುವ ಭಕ್ತರು  ತೇರಿಗೆ ಕಾಯಿ ಒಡೆಸಿದ ಭಕ್ತರು  ಪ್ರಜಾವಾಣಿ ಚಿತ್ರಗಳು/ಭರತ್ ಕಂದಕೂರ   

ಕೊಪ್ಪಳ: ಗವಿಸಿದ್ಧೇಶ್ವರರ ಕರ್ತೃ ಗದ್ದುಗೆ ಬಳಿ, ಗವಿಮಠದ ಆವರಣ, ದಾಸೋಹ ಮನೆ, ಜಾತ್ರಾ ಮೈದಾನ ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಭಕ್ತರ ದಂಡೇ ಕಾಣಸಿಗುತ್ತಿತ್ತು. ರಜಾ ದಿನವಾದ ಭಾನುವಾರ ನಗರದ ಗವಿಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರಿಂದಾಗಿ ಎಲ್ಲ ಸ್ಥಳಗಳೂ ಜನರಿಂದಲೇ ತುಂಬಿ ತುಳುಕುತ್ತಿದ್ದವು. ಮಧ್ಯಾಹ್ನದಷ್ಟರಲ್ಲಿ ಆವರಣದಲ್ಲಿ ಸಾಕಷ್ಟು ಜನದಟ್ಟಣೆ ಉಂಟಾಗಿತ್ತು. 

ಬೆಳಿಗ್ಗೆಯಿಂದಲೇ ಜನ ಕುಟುಂಬದೊಟ್ಟಿಗೆ ತಂಡೋಪತಂಡವಾಗಿ ಗವಿಮಠಕ್ಕೆ ಆಗಮಿಸಿ ಸರತಿಯಲ್ಲಿ ನಿಂತು ಗವಿಸಿದ್ಧೇಶ್ವರರ ದರ್ಶನ ಪಡೆದರು. ಮೋಡ ಕವಿದ ವಾತಾವರಣ ಇದ್ದುದರಿಂದ ಭಕ್ತರಿಗೆ ಹೆಚ್ಚಿನ ಪ್ರಯಾಸವಾಗಲಿಲ್ಲ. ಅಲ್ಲದೆ ಅಚ್ಚುಕಟ್ಟಾದ ಸರತಿ ವ್ಯವಸ್ಥೆ ಇದ್ದುದರಿಂದ ದರ್ಶನಕ್ಕೆ ಹೆಚ್ಚೆ ಹೊತ್ತು ಕಾಯುವ ಅಡಚಣೆಯೂ ಆಗಲಿಲ್ಲ.

ಎನ್‌ಸಿಸಿ ಕಡೆಟ್‌ಗಳು, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಅಜ್ಜನ ದರ್ಶನಕ್ಕೆ ಭಕ್ತರಿಗೆ ಅನುಕೂಲ ಕಲ್ಪಿಸಿಕೊಟ್ಟರು. ಗದ್ದುಗೆಯ ದರ್ಶನ ಪಡೆದ ಭಕ್ತರು ನೇರವಾಗಿ ರಥದ ಬಳಿ ಸಾಗಿ ಕಾಯಿ ಒಡೆಸಿಕೊಂಡು, ದಾಸೋಹ ಮನೆಯತ್ತ ಧಾವಿಸುತ್ತಿದ್ದದ್ದು, ಆ ಬಳಿಕ ಜಾತ್ರಾ ಮೈದಾನದತ್ತ ಮುಖಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.

ADVERTISEMENT

ಜಾತ್ರಾ ಮೈದಾನವಂತೂ ಜನ ಮತ್ತು ವಾಹನಗಳಿಂದ ಕಿಕ್ಕಿರಿದು ತುಂಬಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌.ಎಲ್‌.ಅರಸಿದ್ಧಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿಗೆ ಸೂಚನೆಗಳನ್ನು ನೀಡುತ್ತಿದ್ದದ್ದು ಕಂಡು ಬಂತು.

ಹೆಚ್ಚಿನ ಖಾಸಗಿ ವಾಹನಗಳು ನಗರಕ್ಕೆ ಆಗಮಿಸಿದ್ದರಿಂದಾಗಿ ಕೆಲ ಸ್ಥಳಗಳಲ್ಲಿ ಹೆಚ್ಚಿನ ದಟ್ಟಣೆ ಉಂಟಾಯಿತು. ನಗರದಲ್ಲಿ ಹಾದು ಹೋಗುವ ಮುಖ್ಯ ರಸ್ತೆ, ಗಡಿಯಾರ ಕಂಬದೆಡೆಗೆ ಸಾಗುವ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ವಾಹನ ಸವಾರರು ಹಲವು ಸಮಯ ಕಾಯುವ ಪರಿಸ್ಥಿತಿ ಉಂಟಾಗಿತ್ತು. ಬಸವೇಶ್ವರ ವೃತ್ತದಿಂದ ಜಿಲ್ಲಾಡಳಿತ ಭವನದವರೆಗಿನ ರಸ್ತೆಯಲ್ಲಿನ ಹಾಗೂ ಕಾವ್ಯಾನಂದ ಪಾರ್ಕ್‌ವರೆಗಿನ ರಸ್ತೆಯಲ್ಲಿ ಡಿವೈಡರ್‌ ನಡುವಿನ ತಿರುವುಗಳನ್ನು ಬಂದ್‌ ಮಾಡಿದ್ದರಿಂದಾಗಿ ವಾಹನ ಸವಾರರು ಸಾಕಷ್ಟು ಪ್ರಯಾಸಪಟ್ಟರು. ವಾಹನ ಹಾಗೂ ಜನ ಸಂಚಾರ ನಿಯಂತ್ರಿಸುವಲ್ಲಿ ಪೊಲೀಸರು ಮತ್ತು ಹೋಂ ಗಾರ್ಡ್‌ಗಳು ಹೈರಾಣಾದರು.    

ಕೊಪ್ಪಳದ ಗವಿಸಿದ್ಧೇಶ್ವರರ ತೇರಿಗೆ ಭಾನುವಾರ ಕಾಯಿ ಒಡೆಸುವಲ್ಲಿ ಕಂಡ  ಭಕ್ತರ ದಂಡು
ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಕೊಪ್ಪಳದ ಗವಿಮಠದ ಆವರಣದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂತು. ರಥೋತ್ಸವ ಸಮಾರೋಪವಾಗಿ ಆರು ದಿನಗಳ ಬಳಿಕವೂ ಕೂಡ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡುತ್ತಲೇ  ಇದ್ದಾರೆ 

ತೇರಿಗೆ ಕಾಯಿ ಒಡೆಸಿದ ಭಕ್ತರುದರ್ಶನಕ್ಕೆ ಸರತಿಅನುಕೂಲ ಕಲ್ಪಿಸಿದ ವಾತಾವರಣ

ಭಾವೈಕ್ಯತೆಯ ಕೇಂದ್ರ: ಭಾನುವಾರ ಗವಿಸಿದ್ದಜ್ಜನ ಗದ್ದುಗೆ ದರ್ಶನಕ್ಕೆ ಮುಸ್ಲಿಮರ ನೂರಾರು ಕುಟುಂಬಗಳು ಶ್ರದ್ಧೆಯಿಂದ ಬಂದಿದ್ದವು. ಕಿಲೋ ಮೀಟರ್ ಉದ್ದದ ಕ್ಯೂ ಲೆಕ್ಕಿಸದೇ ಬುರ್ಕಾ ಧರಿಸಿ ಸರದಿಯಲ್ಲಿ ನಿಂತು ದರ್ಶನ ಪಡೆದ ಅವರ ಭಕ್ತಿ ಭಾವೈಕ್ಯತೆ ಕೊಪ್ಪಳದ ನೆಲದ ಗಟ್ಟಿ ಗುಣ ಎಂಬ ಹಿರಿಮೆಯನ್ನು ಗವಿಮಠ ಇಲ್ಲಿನ ಪ್ರತಿ ಮನ ಹಾಗೂ ಮನೆಗಳಲ್ಲಿ ಬಿತ್ತಿದೆ ಎಂಬುದಕ್ಕೆ ಆ ಸಂದರ್ಭ ಸಾಕ್ಷಿಯಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.