ADVERTISEMENT

ಕುಷ್ಟಗಿ | ರೈತರ ಗೆಜ್ಜೆ ಶೇಂಗಾಕ್ಕೆ ಬಂಪರ್‌ ಬೆಲೆ

ನಾರಾಯಣರಾವ ಕುಲಕರ್ಣಿ
Published 26 ಜನವರಿ 2026, 7:38 IST
Last Updated 26 ಜನವರಿ 2026, 7:38 IST
<div class="paragraphs"><p>ಕುಷ್ಟಗಿ ಎಪಿಎಂಸಿಯಲ್ಲಿ ಭಾನುವಾರ ಗರಿಷ್ಠ ಬೆಲೆಗೆ ಮಾರಾಟವಾದ ರೈತ ನಿಂಗಪ್ಪ ಪರಂಗಿ ಅವರ ಗೆಜ್ಜೆಶೇಂಗಾ</p></div>

ಕುಷ್ಟಗಿ ಎಪಿಎಂಸಿಯಲ್ಲಿ ಭಾನುವಾರ ಗರಿಷ್ಠ ಬೆಲೆಗೆ ಮಾರಾಟವಾದ ರೈತ ನಿಂಗಪ್ಪ ಪರಂಗಿ ಅವರ ಗೆಜ್ಜೆಶೇಂಗಾ

   

ಕುಷ್ಟಗಿ: ಅವಧಿಪೂರ್ವದಲ್ಲಿಯೇ ಇಲ್ಲಿಯ ಎಪಿಎಂಸಿ ಪ್ರಾಂಗಣಕ್ಕೆ ಹಿಂಗಾರು ಹಂಗಾಮಿನ ನೀರಾವರಿ ಆಶ್ರಯದ ಶೇಂಗಾ ಆವಕವಾಗುತ್ತಿದ್ದು ಭಾನುವಾರ(ಜ.25) ಬಂಪರ್‌ ದರ ಸಿಕ್ಕಿದ್ದು ರೈತರಲ್ಲಿ ಸಂತಸ ತಂದಿದೆ.

ಮುಂಗಾರು ಹಂಗಾಮು ಕಳೆದ ನಂತರ ಕೊಳವೆಬಾವಿ ನೀರಾವರಿ ಆಶ್ರಯದಲ್ಲಿ ಬಿತ್ತನೆಯಾಗುವ ಬೇಸಿಗೆ ಅವಧಿಯ ಗೆಜ್ಜೆಶೇಂಗಾ ಕಟಾವು ಆರಂಭಗೊಳ್ಳುವುದೇ ಶಿವರಾತ್ರಿ ನಂತರ. ಅಲ್ಲಿಂದ ಸುಮಾರು ನಾಲ್ಕೈದು ತಿಂಗಳವರೆಗೂ ಶೇಂಗಾ ವಹಿವಾಟು ಮುಂದುವರಿದಿರುತ್ತದೆ. ಆದರೆ ಅವಧಿಪೂರ್ವದಲ್ಲಿಯೇ ಕೆಲ ರೈತರು ಶೇಂಗಾ ಬೆಳೆದು ಮಾರುಕಟ್ಟೆಗೆ ತಂದಿದ್ದು ಆರಂಭಿಕ ವಹಿವಾಟಿನಲ್ಲಿ ಭರ್ಜರಿ ದರ ಪಡೆದುಕೊಂಡಿದ್ದಾರೆ. ಇನ್ನೂ ಕೆಲ ವಾರಗಳವರೆಗೆ ಗರಿಷ್ಠ ದರ ದೊರೆಯಬಹುದು. ಯಾದಗಿರಿ ಜಿಲ್ಲೆ ವ್ಯಾಪ್ತಿಯಲ್ಲಿನ ನೀರಾವರಿ ಪ್ರದೇಶದಲ್ಲಿನ ಶೇಂಗಾ ಕಟಾವು ಆದ ನಂತರ ಆವಕದ ಪ್ರಮಾಣ ಹೆಚ್ಚಲಿದೆ. ಆಗ ದರ ಕಡಿಮೆಯಾದರೂ ಸ್ಥಿರವಾಗಿರುವ ಸಾಧ್ಯತೆಯಿದೆ ಎನ್ನುತ್ತಾರೆ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ.

ADVERTISEMENT

ಶೇಂಗಾ ವಹಿವಾಟಿಗೆ ಸಂಬಂಧಿಸಿ ದಂತೆ ಎಪಿಎಂಸಿಯಲ್ಲಿ ಇನ್ನೂ ಆನ್‌ಲೈನ್‌ ಟೆಂಡರ್‌ ಪದ್ಧತಿ ಆರಂಭಗೊಂಡಿಲ್ಲ. ಆದರೂ ಹತ್ತಾರು ದಲ್ಲಾಳಿ ಅಂಗಡಿಗಳಿಗೆ ಶೇಂಗಾ ಆವಕವಾಗಿದೆ. ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹ 11,150 ರಂತೆ ದಾಖಲೆ ದರದಲ್ಲಿ ಮಾರಾಟವಾಗಿದ್ದು ಸರಾಸರಿ ₹ 9,800 ರಂತೆ ಮಾರಾಟವಾಗಿದ್ದು ತಿಳಿಯಿತು. ಮಾರುಕಟ್ಟೆಯಲ್ಲಿ ಶೇಂಗಾ ವಹಿವಾಟು ಆರಂಭಗೊಂಡಿದ್ದರೂ ಎಪಿಎಂಸಿಯಲ್ಲಿ ಮಾಹಿತಿ ಇರಲಿಲ್ಲ. ಈ ಕುರಿತು ವಿವರಿಸಿದ ಕಾರ್ಯದರ್ಶಿ ಅಶೋಕ ತಂಗನೂರು, ಇನ್ನೂ ಒಂದೆ ರಡು ವಾರದ ನಂತರ ಶೇಂಗಾ
ಆವಕವಾಗುತ್ತದೆ. ಈಗ ಮಾರಾಟದ ಮಾಹಿತಿ ವರದಿಯಾಗಿಲ್ಲ ಎಂದು ತಿಳಿಸಿದರು.

ಬರುವ ದಿನಗಳಲ್ಲಿ ಈ ಬಾರಿ ಬೇಸಿಗೆ ಅವಧಿ ಶೇಂಗಾಕ್ಕೆ ಉತ್ತಮ ಧಾರಣೆ ಸಿಗುವ ಲಕ್ಷಣಗಳಿವೆ. ಅತಿ ಹೆಚ್ಚು ಶೇಂಗಾ ಬೆಳೆಯುವ ಗುಜರಾತ್, ತೆಲಂಗಾಣ ರಾಜ್ಯಗಳಲ್ಲಿ ಶೇಂಗಾ ಬೆಳೆ ಕ್ಷೇತ್ರ ಬಹಳಷ್ಟು ಕುಸಿದಿದೆ. ಏನೇ ಆದರೂ ನಮ್ಮ ಭಾಗದ ರೈತರ ಶೇಂಗಾಕ್ಕೆ ಉತ್ತಮ ದರ ಸಿಗಲಿದೆ ಎಂದು ಸಮಿತಿ
ಮೂಲಗಳು ತಿಳಿಸಿವೆ.

ಅವಧಿಪೂರ್ವದಲ್ಲೇ ಮಾರುಕಟ್ಟೆಗೆ ಬಂದ ಶೇಂಗಾ

ಆರಂಭಿಕ ಹಂತದಲ್ಲಿ ಕೈಗೆಟಕಿದ ಭರ್ಜರಿ ದರ

₹ 11,150 ದಾಖಲೆ ದರದಲ್ಲಿ ಮಾರಾಟ

ಸಮಿತಿಗೆ ಇನ್ನು ಮೇಲಷ್ಟೇ ಶೇಂಗಾ ಆವಕವಾಗಲಿದ್ದು, ವಹಿವಾಟು ಆರಂಭಗೊಂಡಿಲ್ಲ. ಭಾನುವಾರ ಮಾರಾಟವಾದ ಮಾಹಿತಿ ಸಮಿತಿ ಗಮನಕ್ಕೆ ಬಂದಿಲ್ಲ
ಅಶೋಕ ತಂಗನೂರು ಎಪಿಎಂಸಿ ಕಾರ್ಯದರ್ಶಿ
ಆವಕ ಕಡಿಮೆ ಇರುವುದರಿಂದ ಹೆಚ್ಚಿನ ಸಂಖ್ಯೆ ಖರೀದಿದಾರರು ಬಂದಿಲ್ಲ. ಮುಂದಿನ ವಾರ ಆನ್‌ಲೈನ್‌ ಟೆಂಡರ್ ಆರಂಭಗೊಂಡರೆ ರೈತರಿಗೆ ಸ್ಪರ್ಧಾತ್ಮಕ ದರ ಸಿಗಲಿದೆ
ಮಹಾಂತಯ್ಯ ಅರಳೆಲೆಮಠ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ
ಉತ್ತಮ ಇಳುವರಿ ಬಂದಿದೆ. ಕಾಳು ಕೂಡ ಚೆನ್ನಾಗಿದೆ. ಹೀಗಾಗಿ ಒಳ್ಳೆಯ ದರ ಸಿಕ್ಕಿದ್ದು ಖುಷಿ ತಂದಿದೆ
ನಿಂಗಪ್ಪ ಪರಂಗಿ ವನಜಭಾವಿ ರೈತ

ಶೇಂಗಾ ಕ್ಷೇತ್ರಕ್ಕೆ ಮೆಕ್ಕೆಜೋಳ ಲಗ್ಗೆ

ಶೇಂಗಾ ಬಿತ್ತನೆ ಬೀಜಕ್ಕೆ ಅಷ್ಟೊಂದು ಬೇಡಿಕೆ ಬಾರದಿರುವುದನ್ನು ಗಮನಿಸಿದರೆ, ಈ ಬಾರಿ ಕುಷ್ಟಗಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಬೇಸಿಗೆ ಅವಧಿಯ ಶೇಂಗಾ ಬಿತ್ತನೆ ಪ್ರದೇಶ ಬಹಳಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಇಲ್ಲಿಯ ವರ್ತಕರು.

ಕಳೆದ ವರ್ಷ ಶೇಂಗಾ ಧಾರಣೆ ಕುಸಿದಿತ್ತು. ಗರಿಷ್ಠ ಧಾರಣಿಯೇ ₹ 7,500 ಇತ್ತು. ರೋಗ, ಕೀಟ ಬಾಧೆ, ಇಳುವರಿ ಕುಂಠಿತ ಹೀಗೆ ವಿವಿಧ ಕಾರಣಗಳಿಂದ ರೈತರು ಶೇಂಗಾ ಬಿತ್ತನೆಗೆ ಹೆಚ್ಚು ಆಸಕ್ತಿ ತೋರಿಲ್ಲ. ಆದರೆ ಶೇಂಗಾಕ್ಕೆ ಪರ್ಯಾಯವಾಗಿ ರೈತರು ಮೆಕ್ಕೆಜೋಳದತ್ತ ಗಮನಹರಿಸಿದ್ದು ಶೇಂಗಾ ಕ್ಷೇತ್ರಕ್ಕೆ ಮೆಕ್ಕೆಜೋಳ ಕಾಲಿಟ್ಟಿದೆ. ವಾಣಿಜ್ಯ ಮತ್ತು ಬೀಜೋತ್ಪಾದನೆ ಹತ್ತಿ ಬೆಳೆ ತೆಗೆದ ನಂತರ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರಿಂದ ಈ ವರ್ಷ ಬೇಸಿಗೆ ಅವಧಿ ಶೇಂಗಾ ಕ್ಷೇತ್ರ ಕಡಿಮೆಯಾಗಿದೆ ಎಂಬುದು ತಿಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.