
ಕುಕನೂರು: ‘ಐತಿಹಾಸಿಕ ಪರಂಪರೆ ಇರುವ ರುದ್ರಮುನೇಶ್ವರ ಗುದ್ನೇಶ್ವರ ಜಾತ್ರೆಗೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬರುವ ಸಾವಿರಾರು ಭಕ್ತರಿಗೆ ಜಾಗ ಉಳಿಸಿಕೊಡಿ’ ಎಂದು ‘ಕಾಡಾ’ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ಹೇಳಿದರು.
ಗುದ್ನೇಶ್ವರ ದೇವಸ್ಥಾನದಿಂದ ವೀರಭದ್ರಪ್ಪ ವೃತ್ತದವರೆಗೆ ಹಮ್ಮಿಕೊಂಡಿದ್ದ, ‘ಗುದ್ನೇಶ್ವರ ಜಾಗ ಉಳಿಸಿ’ ಹೋರಾಟದ ನೇತೃವಹಿಸಿ ಅವರು ಮಾತನಾಡಿದರು.
‘ಸರ್ಕಾರಿ ಕಟ್ಟಡಕ್ಕೆ ಗುದ್ನೇಶ್ವರ ಜಾಗದ ಮೇಲೆ ಏಕೆ ಕಣ್ಣು. ಕುಕನೂರಿನಲ್ಲಿ ಬೇರೆ ಜಾಗವಿಲ್ಲವೇ. ಶಾಸಕ ರಾಯರಡ್ಡಿ ಅಮಾಯಕರಾದ ಜಂಗಮರಿಗೆ 30 ವರ್ಷಗಳಿಂದ ತೊಂದರೆ ಕೊಡುತ್ತಾ ಬಂದಿದ್ದಾರೆ. ಆದರೆ ಈಗ ಅದು ನಡೆಯುವುದಿಲ್ಲ. ಮುಂದಿನ ದಿನಮಾನಗಳಲ್ಲಿ ಇಡೀ ಕ್ಷೇತ್ರದ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.
‘ಅಧಿಕಾರ ದರ್ಪದಿಂದ ಪೊಲೀಸರು ಹಾಗೂ ಅಧಿಕಾರಿ ವರ್ಗ ಬಳಸಿಕೊಂಡು ಸಾಮಾನ್ಯ ಜನರ ಮೇಲೆ ಕೇಸು ದಾಖಲಿಸುತ್ತಿರುವ ನೀವು ರುದ್ರಮುನೇಶ್ವರ ಶಾಪಕ್ಕೆ ಬಲಿಯಾಗುವುದು ನೂರಕ್ಕೆ ನೂರರಷ್ಟು ಸತ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಮುಖಂಡ ನವೀನ್ ಗುಳಗಣ್ಣನವರ್ ಮಾತನಾಡಿ, ‘ಗುದ್ನೇಪ್ಪನಮಠದ ಜಮೀನನ್ನು ಸರ್ಕಾರ ಕಬಳಿಸುತ್ತಿರುವುದು ಖಂಡನೀಯ. 800 ವರ್ಷಗಳ ಇತಿಹಾಸ ಹೊಂದಿರುವ ಮಠದ ಆಸ್ತಿಗಾಗಿ ಇಲ್ಲಿನ ಶಾಸಕರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಕುಕನೂರು ಪಟ್ಟಣ ಬಂದ್ ಮಾಡಿ ಯಾರ ವಿರುದ್ಧವಾಗಿ ಪ್ರತಿಭಟನೆ ಮಾಡಿದ್ದೀರಿ ಏನ್ನುವುದೇ ಅರ್ಥವಾಗುತ್ತಿಲ್ಲ, ಮಠದ ಜಮೀನನ್ನು ಈಗಾಗಲೇ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದ್ದು, ಬೇಕಾದಷ್ಟು ಸರ್ಕಾರಿ ಕಟ್ಟಡಗಳು ನಿರ್ಮಾಣವಾಗಿದೆ. ಇನ್ನುಳಿದ ಜಮೀನನ್ನಾದರೂ ಬಿಡಿ’ ಎಂದು ಆಗ್ರಹಿಸಿದರು.
ಅನ್ನದಾನೇಶ್ವರ ಶಾಖಾಮಠದ ಮಹದೇವ ಸ್ವಾಮೀಜಿ, ನೀಲಗುಂದ ಮಠದ ಪ್ರಭುಲಿಂಗ ದೇವರು, ಮಠದ ಭಕ್ತರಾದ ಮಾರುತಿ ಗಾವರಾಳ, ಶರಣಪ್ಪ ಗುಂಗಾಡಿ, ಸಿದ್ದು ಉಳ್ಳಾಗಡ್ಡಿ, ಮಹೇಶ ಕಲ್ಮಠ, ಜಗನ್ನಾಥ ಭೋವಿ, ಕನಕಪ್ಪ ಬ್ಯಾಡರ್, ಕರಿಬಸಯ್ಯ ಬಿನ್ನಾಳ, ಶಿವಕುಮಾರ ನಾಗಲಪುರಮಠ, ಮಹೇಶ್ವರಿ ಸಾವಳಗಿಮಠ, ಮಂಜುನಾಥ ನಾಡಗೌಡ, ಚಂದ್ರು ಬಗನಾಳ, ಮಧು ಕಲ್ಮನಿ, ವಿನಾಯಕ ಯಾಳಗಿ, ಮಹಾಂತೇಶ ಹೂಗಾರ, ವಿನಾಯಕ ಸರಗಣಾಚಾರ, ಮಲ್ಲು ಚೌಧರಿ, ಬಾಲರಾಜ್ ಗಾಳಿ, ಶರಣಪ್ಪ ಕಾಳಿ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.