
ಹನುಮಸಾಗರ: ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ಕಸದ ರಾಶಿಯಿಂದ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಅಪಾಯ ಬೀರುತ್ತಿದೆ. ರಸ್ತೆಗಳಲ್ಲಿನ ತ್ಯಾಜ್ಯದ ದುರ್ವಾಸನೆಯಿಂದ ಜನ ರೋಸಿ ಹೋಗಿದ್ದಾರೆ.
ಪಟ್ಟಣದ ಸಜ್ಜನ ಸೂಪರ್ ಮಾರ್ಕೆಟ್ ಮುಂಭಾಗ, ರಾಜ್ಯ ಹೆದ್ದಾರಿ ಕುಷ್ಟಗಿ ರಸ್ತೆಬದಿ, ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗ, ಪಟ್ಟಣ ಪಂಚಾಯಿತಿಯ ಹಿಂಬಾಗದಲ್ಲಿ ದೊಡ್ಡ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದ್ದು, ದುರ್ವಾಸನೆಗೆ ಜನ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಸ್ಥಿತಿ ದುಸ್ತರವಾಗಿದ್ದು, ಕಾಲೇಜು ಮುಂಭಾಗದ ನಾಲೆಯಲ್ಲಿ ಮಾಂಸದ ಅಂಗಡಿಗಳ ತ್ಯಾಜ್ಯ ಎಸೆಯಲಾಗುತ್ತದೆ. ‘ಪ್ರತಿದಿನ ಕಾಲೇಜಿಗೆ ಹೋಗುವಾಗ ಮೂಗು ಮುಚ್ಚಿಕೊಂಡು ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಉಸಿರು ಗಟ್ಟಿ ಹಿಡಿದುಕೊಂಡು ಹೋಗಬೇಕು’ ಎನ್ನುತ್ತಾರೆ ಕಾಲೇಜಿನ ವಿದ್ಯಾರ್ಥಿಯೊಬ್ಬರು.
ಪ್ರತಿದಿನ ಮನೆಗಳಿಂದ, ಅಂಗಡಿ-ಮಳಿಗೆಗಳಿಂದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣ. ಕಸವನ್ನು ಖಾಲಿ ಜಾಗಗಳಲ್ಲಿ, ರಸ್ತೆ ಬದಿಗಳಲ್ಲಿ ಹಾಗೂ ನಾಲೆಗಳಲ್ಲಿ ಎಸೆಯಲಾಗುತ್ತಿದ್ದು, ಮಳೆ ಬಂದಾಗ ಅದೇ ಕಸ ರಸ್ತೆ ಮೇಲೆ ಹರಿದು ಸಂಚಾರಕ್ಕೂ ತೊಂದರೆ ಉಂಟಾಮಾಡುತ್ತದೆ ಎನ್ನುತ್ತಾರೆ ಸ್ಥಳೀಯರು.
‘ಕಸದ ರಾಶಿಯಿಂದ ಸೊಳ್ಳೆ, ಇಲಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಜ್ವರ, ಕೆಮ್ಮು, ಚರ್ಮರೋಗ ಹಾಗೂ ಡೆಂಗ್ಯೂ ಮುಂತಾದ ರೋಗಗಳ ಭೀತಿ ಕಾಡುತ್ತಿದೆ. ಮಕ್ಕಳ ಆರೋಗ್ಯದ ಬಗ್ಗೆ ನಮಗೆ ಭಯವಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿಯ ಹಿಂಬಾಗದಲ್ಲಿಯೇ ಮಹಿಳೆಯರ ಶೌಚಾಲಯದ ಪಕ್ಕದಲ್ಲಿ ಕಸದ ರಾಶಿ ಬಿದ್ದಿರುತ್ತದೆ. ಜನರು ಕೂಡ ಇಲ್ಲಿ ಮೂಗು ಮುಚ್ಚಿಕೊಂಡು ನಡೆಯುವ ಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಕಸವನ್ನು ಬೇರೆ ಕಡೆ ವಿಲೇವಾರಿ ಮಾಡಿ ಜನರಿಗೆ ಮುಕ್ತವಾಗಿ ನಡೆದಾಡುವಂತೆ ಮಾಡಬೇಕು’ ಎನ್ನುತ್ತಾರೆ ಸಾರ್ವಜನಿಕರು.
‘ಹನುಮಸಾಗರಕ್ಕೆ ಶಾಶ್ವತ ಪರಿಹಾರವಾಗಿ ತ್ಯಾಜ್ಯ ವಿಲೇವಾರಿ ಘಟಕ ತಕ್ಷಣ ಸ್ಥಾಪಿಸಬೇಕು. ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಕಂಪೋಸ್ಟ್ ಘಟಕ ಅಥವಾ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆ ಮಾಡಬೇಕು. ಮನೆಮನೆಗಳಲ್ಲಿ ಕಸ ವಿಂಗಡಣೆ ಕುರಿತು ಜಾಗೃತಿ ನಡೆಸುವುದು ಅವಶ್ಯಕ’ ಎಂದು ಪರಿಸರ ತಜ್ಞರು, ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
‘ಇದು ಕೇವಲ ಸ್ವಚ್ಛತೆಯ ಪ್ರಶ್ನೆಯಲ್ಲ, ನಮ್ಮ ಆರೋಗ್ಯ, ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಹನುಮಸಾಗರವನ್ನು ಸ್ವಚ್ಛ ಹಾಗೂ ಆರೋಗ್ಯಕರ ಪಟ್ಟಣವಾಗಿಸಲು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಅನಿವಾರ್ಯ’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.