ಕೊಪ್ಪಳದ ಅಂಜನಾದ್ರಿ ಬೆಟ್ಟದ ಕಡೆ ಹೆಜ್ಜೆ ಹಾಕಿದ ಹನುಮಮಾಲಾಧಾರಿಗಳು
ಗಂಗಾವತಿ (ಕೊಪ್ಪಳ ಜಿಲ್ಲೆ): ಐತಿಹಾಸಿಕ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮ ಗುರುವಾರ ಬೆಳಗಿನ ಜಾವದಿಂದಲೇ ನಡೆಯಲಿದ್ದು, ಜಿಲ್ಲೆ, ಹೊರಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಮಾಲಾಧಾರಿಗಳು ಈಗಾಗಲೇ ಅಂಜನಾದ್ರಿಗೆ ಬಂದಿದ್ದಾರೆ.
ಮಾಲೆ ವಿಸರ್ಜನೆ ಅಂಗವಾಗಿ ಜಿಲ್ಲಾಡಳಿತ ಪಾರ್ಕಿಂಗ್, ತುರ್ತು ಚಿಕಿತ್ಸೆ, ಕುಡಿಯುವ ನೀರು, ಶೌಚಾಲಯ, ಅಗ್ನಿಶಾಮಕ ದಳದ ವ್ಯವಸ್ಥೆ ಸೇರಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲ್ಲಿಯೂ ತೊಂದರೆಯಾಗದಂತೆ ಕ್ರಮ ವಹಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಅಂಜನಾದ್ರಿ ಮುಂಭಾಗ, ದ್ವಾರಬಾಗಿಲು, ಪಾದಗಟ್ಟೆ, ಗರ್ಭಗುಡಿ, ದೇವಸ್ಥಾನಕ್ಕೆ ತೆಂಗಿನಗರಿ, ತಾಳೆಗರಿ, ಬಾಳೆದಿಂಡು, ಹೂವಿನ ಜತೆಗೆ ವಿದ್ಯುತ್ ಅಲಂಕಾರ ಮಾಡಲಾಗಿದ್ದು, ಮಾಲಧಾರಿಗಳಿಗೆ ಭವ್ಯ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಾದಯಾತ್ರೆ: ಹನುಮ ಮಾಲಾಧಾರಣೆ ಮಾಡಿದ ಭಕ್ತರು ಗುರುವಾರ ಬೆಳಿಗ್ಗೆಯಿಂದಲೇ ಗದಗ, ಕೊಪ್ಪಳ, ಹುಲಗಿ, ಹೊಸಪೇಟೆ, ಲಿಂಗಾಪುರ, ಕಂಪಸಾಗರ, ಕಂಪ್ಲಿ, ಕಮಲಾಪುರ, ಸಂಡೂರು, ಬಳ್ಳಾರಿ, ಸಿಂಧನೂರು, ಕಾರಟಗಿ, ಕನಕಗಿರಿ ಭಾಗದಿಂದ ಪಾದಯಾತ್ರೆ ಮೂಲಕ ಅಂಜನಾದ್ರಿಗೆ ಭೇಟಿ ನೀಡಿದರು.
ಇಲ್ಲಿನ ವಿಜಯನಗರ ಉಪಕಾಲುವೆ, ಪಂಪಾಸರೋವರ, ತುಂಗಭದ್ರಾ ನದಿಪಾತ್ರದಲ್ಲಿ ಸ್ನಾನಮಾಡಿ, ಹನುಮ ಜಪ ಮಾಡುತ್ತಾ ಬೆಟ್ಟ ಏರಿ, ಆಂಜನೇಯನ ದರ್ಶನ ಪಡೆದು, ಕೆಲ ಭಕ್ತರು ಮಾಲೆ ವಿಸರ್ಜಿಸಿದರೆ, ಇನ್ನೂ ಕೆಲ ಭಕ್ತರು ಗುರುವಾರದ ಮುಹೂರ್ತಕ್ಕೆ ದಿನಕ್ಕೆ ಕಾದರು. ಕೆಲವೆಡೆ ಪಾರ್ಕಿಂಗ್ ಸ್ಥಳಗಳಲ್ಲಿಯೇ ಭಕ್ತರು ಉಪಾಹಾರ ಸೇವಿಸಿದರು.
ಬಂದೋಬಸ್ತ್: ಪೊಲೀಸ್ ಇಲಾಖೆ ಹುಲಗಿ ಮಾರ್ಗದ ಹಿಟ್ನಾಳ, ಶಿವಪುರ ಕ್ರಾಸ್, ಸಾಣಾಪುರ, ವಿರೂಪಾಪುರಗಡ್ಡೆ, ಹನುಮನ ಹಳ್ಳಿ ಹಾಗೂ ಗಂಗಾವತಿ ಮಾರ್ಗದ ಸಂಗಾಪುರ, ಕಡೆಬಾಗಿಲು, ಆನೆಗೊಂದಿ, ಜಂಗ್ಲಿ ಕ್ರಾಸ್ ಬಳಿ ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್ ಕಲ್ಪಿಸಿದೆ. ಮಾಲಾಧಾರಿಗಳ ವಾಹನಗಳಿಗೆ ಮಾತ್ರ ಅಂಜನಾದ್ರಿ ಮಾರ್ಗವಾಗಿ ತೆರಳಲು ಅವಕಾಶ ನೀಡಲಾಗಿದೆ. ಪೊಲೀಸರು ಸರತಿ ಮೇಲೆ ದಿನದ 24 ಗಂಟೆಯೂ ಕರ್ತವ್ಯದಲ್ಲಿ ತೊಡಗಿದ್ದಾರೆ.
80 ಸಾವಿರ ಭಕ್ತರಿಗೆ ಅಡುಗೆ: ಮಾಲಾ ವಿಸರ್ಜನೆಯ ದಿನವೂ ಸೇರಿ ಒಟ್ಟು 80 ಸಾವಿರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲು ಅಡುಗೆ ಭಟ್ಟರು ಸಜ್ಜಾಗಿದ್ದಾರೆ. ಸಂಜೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪಲಾವ್, ಟೊಮೆಟೊ ಗೊಜ್ಜು, ಮಾಲಾ ವಿಸರ್ಜನೆ ದಿನ ಅನ್ನ, ಸಾಂಬಾರ್, ಹುಗ್ಗಿ, ಉಪ್ಪಿನಕಾಯಿ ನೀಡಲಾಗುತ್ತದೆ.
ಮಾಲಾಧಾರಿಗಳಿಗೆ ಮತ್ತು ಭಕ್ತರಿಗೆ, ಅಧಿಕಾರಿಗಳಿಗೆ ಯಾವುದೇ ಸಮಸ್ಯೆ, ತೊಂದರೆ ಬಂದಲ್ಲಿ, ಮಾಹಿತಿ ನೀಡಿದರೆ ನೆರವಿಗೆ ಧಾವಿಸಿಲು ಅಂಜನಾದ್ರಿ ಪಾದಗಟ್ಟೆ, ಪಾರ್ಕಿಂಗ್ ಸ್ಥಳ, ವೇದಪಾಠ ಶಾಲೆಯ ಬಳಿ ಸೇರಿ ಅಗತ್ಯ ಕಡೆ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.
ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಗಂಗಾವತಿ ತಹಶೀಲ್ದಾರ್ ಯು.ನಾಗರಾಜ, ಕನಕಗಿರಿ ತಹಶೀಲ್ದಾರ್ ವಿಶ್ವನಾಥ ಮುರಡಿ, ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಅಂಜನಾದ್ರಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶರಾವ್, ವ್ಯವಸ್ಥಾಪಕ ವೆಂಕಟೇಶ ಮಡಿವಾಳ ಸೇರಿದಂತೆ ಅಧಿಕಾರಿಗಳು ಮಾಲಾಧಾರಿ ವಿಸರ್ಜನೆಯ ಅಂತಿಮ ಸಿದ್ಧತೆಗಳನ್ನು ಗುರುವಾರ ಪರಿಶೀಲಿಸಿದರು.
ಕೊಪ್ಪಳದ ಅಂಜನಾದ್ರಿ ಹಿಂಬದಿಯ ವೇದಪಾಠ ಶಾಲೆ ಬಳಿ ಭಕ್ತರಿಗಾಗಿ ತಯಾರಿಸುವ ಉಪಹಾರದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜಿ.ಜನಾರ್ದನ ರೆಡ್ಡಿ ಅವರು ಅಡುಗೆ ತಯಾರಿ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು
ಹನುಮಾಮಾಲಾ ವಿಸರ್ಜನೆಯ ನಿಮಿತ್ತ ಗುರುವಾರ ಶಾಸಕ ಜಿ.ಜನಾರ್ದನ ರೆಡ್ಡಿ ಅಧಿಕಾರಿಗಳೊಂದಿಗೆ ಅಂಜನಾದ್ರಿ ಹಿಂಬದಿಯ ವೇದಪಾಠ ಶಾಲೆ ಬಳಿ ಭಕ್ತರಿಗಾಗಿ ತಯಾರಿಸುವ ಉಪಹಾರದ ಸ್ಥಳಕ್ಕೆ ಭೇಟಿ ನೀಡಿ, ಅಡುಗೆ ತಯಾರಿ ಪರಿಶೀಲಿಸಿದರು.
ನಂತರ ಮಾತನಾಡಿ, ‘ಈ ಬಾರಿ ಹನುಮಮಾಲಾ ವಿಸರ್ಜನೆಗೆ ಅಂದಾಜು ಒಂದು ಲಕ್ಷ ಮಾಲಾಧಾರಿಗಳು ಬರುವ ನಿರೀಕ್ಷೆಯಿದ್ದು, ಅದರಂತೆಯೇ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಮಾಲಾ ವಿಸರ್ಜನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಬರಬೇಕಿತ್ತು. ಕೇಂದ್ರ ನಾಯಕರು ತುರ್ತುಗಾಗಿ ದೆಹಲಿಗೆ ಬರುವಂತೆ ಹೇಳಲಿರುವ ಕಾರಣ ಬರುತ್ತಿಲ್ಲ. ಜನವರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯುವಮೋರ್ಚಾ ಘಟಕದ ಕಾರ್ಯಕರ್ತರ ಜತೆಗೆ ಅಂಜನಾದ್ರಿ ಬೆಟ್ಟ ಏರುತ್ತಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.