ADVERTISEMENT

ವಿಸ್ಮಯದ ತಾಣ ಅಂದಿಗಾಲೇಶ್ವರ ಗುಡ್ಡ

ಅಂಜನಾದ್ರಿಯ ಹನುಮಂತನಿಗೂ ಇಲ್ಲಿ ನಂಟು: ನಿಸರ್ಗ ನಿರ್ಮಿತ ಸುಂದರ ಪ್ರದೇಶ

ಸಿದ್ದನಗೌಡ ಪಾಟೀಲ
Published 30 ಮೇ 2021, 2:58 IST
Last Updated 30 ಮೇ 2021, 2:58 IST
ಕೊಪ್ಪಳ ತಾಲ್ಲೂಕಿನ ಅಗಳಕೇರಾ ಸಮೀಪ ಇರುವ ಅಂದಿಗಾಲೇಶ ಪರ್ವತದ ಮೇಲೆ ಇರುವ ಆಂಜನೇಯನ ದೇವಾಲಯ
ಕೊಪ್ಪಳ ತಾಲ್ಲೂಕಿನ ಅಗಳಕೇರಾ ಸಮೀಪ ಇರುವ ಅಂದಿಗಾಲೇಶ ಪರ್ವತದ ಮೇಲೆ ಇರುವ ಆಂಜನೇಯನ ದೇವಾಲಯ   

ಕೊಪ್ಪಳ: ಹನುಮ ಜನಿಸಿದ ನಾಡು ಕಿಷ್ಕಿಂಧೆಯ ಅಂಜನಾದ್ರಿಯ ನಂತರ ಹೆಚ್ಚು ಪ್ರಸಿದ್ಧವಾಗಿರುವುದು ಅಂದಿಗಾಲೇಶನ ಪರ್ವತ. ಇಲ್ಲಿಯೂ ಕೂಡ ಹನುಮನ ಮೂರ್ತಿಗೆ ಅಗ್ರ ಪೂಜೆ.

ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗಿ ಸಮೀಪದಲ್ಲಿ ಇರುವ ಬೃಹತ್ ಏಕಶಿಲಾ ಅಂದಿಗಾಲೇಶನ ಗುಡ್ಡ ಏರುವುದೆಂದರೆ ಅದು ಸಾಹಸದ ಕೆಲಸವೇ ಸರಿ.ಕೆರೆಹಳ್ಳಿ, ಶಹಾಪುರ, ಶಿವಪುರ, ಮುಸಲಾಪುರ, ಚಂದ್ರಗಿರಿ, ಲಿಂಗದಹಳ್ಳಿ, ಬಿಳೇಬಾವಿ ಮತ್ತು ಹೊಸೂರು ಗ್ರಾಮಗಳ ವ್ಯಾಪ್ತಿಯಲ್ಲಿಬರುವ ಈ ಗುಡ್ಡ ಜಿಲ್ಲೆಯ ಭೌಗೋಳಿಕಪ್ರಾಕೃತಿಕ ಸೌಂದರ್ಯ ನಿಸರ್ಗ ಆರಾಧಕರನ್ನು ಕೈಬೀಸಿ ಕರೆಯುತ್ತದೆ. ಮಂದಿರದ ಸುತ್ತಲೂ ಕೆಲ ನಿಗೂಢ, ವಿಸ್ಮಯ ತಾಣಗಳು ಜೀವ ಸಂಜೀವಿನಿಯಾಗಿವೆ. ಈ ಪೈಕಿ ಕೋತಿಗುಂಡಿನಲ್ಲಿರುವ ಈ ಅಮೃತದ ವರತೆಯೂ ಒಂದು.

ಕೋತಿಗುಂಡು:ಕೋತಿಗುಂಡಿನ ವರತೆ ಎಂದು ಕರೆಯುವ ಈ ತಾಣದಲ್ಲಿ ಅಮೃತದಂತೆ ನೀರು ಸಂಗ್ರಹಣಗೊಂಡಿದೆ. ನೂರಾರು ವರ್ಷಗಳಿಂದಲೂ ಈ ವರತೆ ಗುಡ್ಡದಲ್ಲಿರುವ ಚಿರತೆ, ಕರಡಿ, ಆಡು, ಮೇಕೆಸೇರಿದಂತೆ ಅನೇಕ ಪ್ರಾಣಿಗಳಿಗೆ ಆಶ್ರಯತಾಣ.ಎದೆ ಬಳ್ಳಿ, ಕರ್ಚಿಗೇನ ಬಳ್ಳಿ, ಬಿಳೇ ಗೊರವಿ, ಬಿಳಿ ಮತ್ತು ಕೆಂಪು ಜೇನಿ ಬಳ್ಳಿ, ಚಿಲ್ಲ್ ಬಳ್ಳಿ ಸೇರಿದಂತೆ ಹಲವು ಬಗೆಯ ಔಷಧೀಯ ಸಸ್ಯಗಳಿಂದ ಕೂಡಿದ ಎಲೆಗಳು ಮಳೆಗೆ ಸಿಲುಕಿ ಈ ವರತೆಗೆ ಧುಮುಕುತ್ತವೆ. ಈ ನೀರಿನಲ್ಲಿ ಕರಗಿ ರಸರೂಪದಲ್ಲಿ ಸಂಗ್ರಹಗೊಂಡಿದ್ದರಿಂದ ಇದಕ್ಕೆ ಔಷಧೀಯ ಗುಣ ಬಂದಿದೆ.

ADVERTISEMENT

ಈ ನೀರು ಕುಡಿದ ಯಾವುದೇ ಜೀವಿಗೆ ರೋಗಗಳೂ ಬರುವುದಿಲ್ಲ. ಆರೋಗ್ಯಕ್ಕೆ ಪೂರಕವಾದ ಈ ಅಮೃತದ ವರತೆ ನೀರು ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಈ ಭಾಗದ ಹಳ್ಳಿಗರಲ್ಲಿದೆ. ಕವಳೆ ಗಿಡ, ಅಂಕಲಿ ಗಿಡ, ಉಲುಪಿ ಗಿಡ ಮತ್ತು ಬರುಗೆ ಗಿಡದ ಹಣ್ಣುಗಳು ಕೂಡ ಆರೋಗ್ಯಕ್ಕೆ ಸಹಾಯಕಾರಿ. ಕಾಡಿನಲ್ಲಿರುವ ಹಣ್ಣು ಸೇವಿಸಿ, ಈ ನೀರು ಕುಡಿದರೆ ಎಂತಹ ಅನಾರೋಗ್ಯ ಪೀಡಿತರೂ ಕೂಡ ಚೇತರಿಕೆ ಕಾಣುತ್ತಾರೆ ಎನ್ನುತ್ತಾರೆ ಪರಿಸರ ಪ್ರೇಮಿ ವೀರಣ್ಣ ಕೋಮಲಾಪುರ.

ಕಾಡು ಮಲ್ಲಿಗೆ, ಅಡವಿ ಸಬ್ಬಸಿಗೆ, ಕೆಂಪು ಮತ್ತು ಬಿಳಿ ಗುಲಗಂಜಿ, ರಾಗೇರಿ ಬಳ್ಳಿ ಮತ್ತು ಬಿಳಿ ಹುಲಿ ಬಳ್ಳಿಯ ಎಲೆಗಳೂ ಕೂಡ ಈ ನೀರಿನಲ್ಲಿ ಮಿಶ್ರಣಗೊಂಡಿವೆ. ಈ ನೀರಿನ ಸೇವನೆ ಮಾಡಿದರೆ, ಧಾತು ಸಮಸ್ಯೆಗೆ ಪರಿಹಾರವಿದೆಯಂತೆ. ಸಂತಾನ ಹೀನರು ಶ್ರೀ ಅಂದಿಗಾಲೀಶನ ದರ್ಶನ ಪಡೆದು ಬಳಿಕ ಕೋತಿ ಗುಂಡಿನ ಈ ಅಮೃತ ನೀರನ್ನು ಔಷಧ ರೂಪದಲ್ಲಿ ಬಳಸಿದರೆ ಪುರುಷತ್ವ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಬಾಯಾರಿಕೆಯಿಂದ ಬಳಲುವವರಿಗೂ ಕೂಡ ಈ ನೀರಿನ ಸೇವೆ ಪುಷ್ಠಿದಾಯಕ ಎಂದೂ ಸ್ಥಳೀಯರು ಹೇಳುತ್ತಾರೆ. ಆದರೆ, ದುರ್ಗಮ ತಾಣದಲ್ಲಿ ಈ ಕೋತಿಗುಂಡು ಇರುವುದರಿಂದ ಅಲ್ಲಿಗೆ ಕುರಿಗಾಹಿಗಳು ಮಾತ್ರ ತೆರಳಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.