ಹನುಮಸಾಗರ: ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಗ್ರಾಮ ಹಲವು ದಶಕಗಳಿಂದ ಜಿಲ್ಲೆಯ ಅತಿದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಹೆಗ್ಗಳಿಕೆ ಹೊಂದಿದೆ. ಇದನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಅನೇಕ ವರ್ಷಗಳ ಹೋರಾಟಕ್ಕೆ ರಾಜ್ಯ ಸರ್ಕಾರ ಈಗ ಅಸ್ತು ಎಂದಿದ್ದು, ಇದರಿಂದಾಗಿ ಅಭಿವೃದ್ಧಿಯ ಕನವರಿಕೆಗಳು ಕೂಡ ಮುನ್ನಲೆಗೆ ಬಂದಿವೆ.
ಇತ್ತೀಚೆಗೆ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಘೋಷಣೆ ಮಾಡಿದ್ದಾರೆ. 2011ರ ಜನಗಣತಿ ಪ್ರಕಾರ ಹನುಮಸಾಗರದಲ್ಲಿ 14,874 ಜನಸಂಖ್ಯೆ, 19.2 ಚದರ ಕಿಲೋ ಮೀಟರ್ ವಿಸ್ತೀರ್ಣ, ಪ್ರತಿ ಚದರ ಕಿಲೋ ಮೀಟರ್‌ಗೆ 775 ಜನಸಾಂದ್ರತೆಯಿದೆ. ಪಟ್ಟಣ ಪಂಚಾಯಿತಿಯಾಗಿ ಘೋಷಿಸಲು ಅಗತ್ಯವಿರುವ ಕನಿಷ್ಠ 15 ಸಾವಿರ ಜನಸಂಖ್ಯೆ ಕೊರತೆಯೇ ಮೇಲ್ದರ್ಜೆಗೇರಿಸಲು ಅಡ್ಡಿಯಾಗಿತ್ತು. ಈಗಿನ ಸ್ಥಿತಿಯಲ್ಲಿ ಜನಗಣತಿ, ಸೌಲಭ್ಯ, ಜನಸಾಂದ್ರತೆ ಹೀಗೆ ಎಲ್ಲದರಲ್ಲಿಯೂ ವ್ಯತ್ಯಾಸವಾಗಿವೆ.
ಕೆಲವು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯಿತಿಯಾಗಿ ಪರಿಗಣಿಸಲು ನಿರ್ಣಯ ಕೈಗೊಂಡಿದ್ದರೂ ಆಗಿನಿಂದ 2024 ರವರೆಗೆ ಈ ನಿರ್ಣಯದ ಮೇಲೆ ಸರ್ಕಾರ ನಿಶ್ಚಿತ ಕ್ರಮ ಕೈಗೊಂಡಿರಲಿಲ್ಲ. ಸ್ಥಳೀಯರು 2008ರಿಂದಲೇ ಸಾಕಷ್ಟು ಮನವಿ ಸಲ್ಲಿಸಿ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದರು. ಕ್ಷೇತ್ರದ ಜನಪ್ರತಿನಿಧಿಗಳಾದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಇದಕ್ಕಾಗಿ ಪ್ರಯತ್ನ ಮಾಡಿದ್ದರು.
ದೊಡ್ಡ ಹೋಬಳಿ ಕೇಂದ್ರವಾದ ಹನುಮಸಾಗರ ಪೊಲೀಸ್ ಠಾಣೆ, ಸಮುದಾಯ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳು, 10ಕ್ಕೂ ಹೆಚ್ಚು ಸಹಕಾರ ಬ್ಯಾಂಕ್‌ಗಳು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಐಟಿಐ ಮತ್ತು ಪದವಿ ಕಾಲೇಜು, ಸರ್ಕಾರಿ ವಸತಿ ಶಾಲೆಗಳಿವೆ. ವಾರ್ಷಿಕ ತೆರಿಗೆ ಸಂಗ್ರಹ ₹30 ಲಕ್ಷಕ್ಕಿಂತಲೂ ಹೆಚ್ಚಿದೆ. 80ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿದೆ.
ಅಭಿವೃದ್ಧಿಯ ನಿರೀಕ್ಷೆ: ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರುವುದಿರಂದ ಹೆಚ್ಚು ಅನುದಾನ ಬರುತ್ತದೆ. ಸ್ಥಾನಮಾನ ಕೂಡ ಬದಲಾಗುತ್ತದೆ ಎನ್ನುವ ನಿರೀಕ್ಷೆ ಜನರದ್ದು.
ಪ್ರತಿ ವಾರ್ಡ್‌ನ ಅಭಿವೃದ್ಧಿಗೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲು ಈಗ ಅವಕಾಶ ಸಿಗಲಿದೆ. ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ, ನಗರಾಭಿವೃದ್ಧಿ ಇಲಾಖೆಯ ಯೋಜನೆಗಳ ಲಾಭ, ಮೂಲಸೌಕರ್ಯ ಕಲ್ಪಿಸಲು ಆದ್ಯತೆ, ರಸ್ತೆಗಳ ವಿಸ್ತರಣೆ, ಒಳ ಚರಂಡಿ ವ್ಯವಸ್ಥೆ, ಶೈಕ್ಷಣಿಕ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳು ಲಭಿಸುವ ನಿರೀಕ್ಷೆ ಬಲವಾಗಿದೆ.
ಮೂಲವಾಗಿ ವಾರ್ಡ್ ವ್ಯಾಪ್ತಿಯ ಜನರಿಗೆ ಮೂಲ ಸೌಕರ್ಯ, ರಸ್ತೆಗಳ ದುರಸ್ತಿ, ಸಕಾಲಕ್ಕೆ ನೀರಿನ ವ್ಯವಸ್ಥೆ, ಕಸ ವಿಲೇವಾರಿಗೆ ಆದ್ಯತೆ ಹೀಗೆ ಅನೇಕ ಕೆಲಸಗಳು ಪರಿಣಾಮಕಾರಿಯಾಗಿ ಆಗಬೇಕಾಗಿದೆ. ಗ್ರಾಮ ಪಂಚಾಯಿತಿಯಿಂದ ಸ್ಥಾನಮಾನ ಬಳಿಕ ಅಭಿವೃದ್ಧಿವೂ ವೇಗ ಸಿಗಬೇಕು ಎನ್ನುವುದು ಇಲ್ಲಿನ ಜನರ ಆಶಯವಾಗಿದೆ.
ಪಟ್ಟಣ ಪಂಚಾಯಿತಿ ಆಗಿದ್ದು ಖುಷಿಯಾಗಿದೆ. ಇದು ಹನುಮಸಾಗರ ಗ್ರಾಮದ ಎಲ್ಲ ಜನರ ಕನಸು ನನಸಾದ ಗಳಿಗೆ. ಮುಂದಿನ ದಿನಗಳಲ್ಲಿ ಗ್ರಾಮದ ಇನ್ನಷ್ಟು ಅಭಿವೃದ್ಧಿಗೆ ಹೆಚ್ಚು ಅನುದಾನ ಬರುತ್ತದೆ. ಕೆಲಸಗಳು ಕೂಡ ವೇಗವಾಗಿ ಆಗಬೇಕಿದೆರುದ್ರಗೌಡ ಗೌಡಪ್ಪನವರ ಹನುಮಸಾಗರ ಗ್ರಾ.ಪಂ. ಅಧ್ಯಕ್ಷ
ಹನುಮಸಾಗರವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅನೇಕರು ಶ್ರಮಿಸಿದ್ದಾರೆ. ಜನಪ್ರತಿನಿಧಿಗಳು ಹಗಲಿರುಳು ಕೆಲಸ ಮಾಡಬೇಕು. ಸರಿಯಾದ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿಗೆ ಮುಂದಾಗಬೇಕುಪ್ರಭು ಡಿಪೋ ಸ್ಥಳೀಯ ನಿವಾಸಿ
ಪಟ್ಟಣ ಪಂಚಾಯಿತಿ ಆಗಿರುವುದು ಖುಷಿಯ ವಿಚಾರ. ಈಗ ಒಳಚರಂಡಿ ವ್ಯವಸ್ಥೆ ಶುದ್ಧ ಕುಡಿಯುವ ನೀರು ಮತ್ತು ಬೀದಿ ಬೆಳಕು ಸೌಲಭ್ಯ ಕಲ್ಪಿಸಬೇಕು. ಹೆಸರಷ್ಟೇ ಬದಲಾದರೆ ಸಾಲದು; ಜನರ ಜೀವನ ಮಟ್ಟವೂ ಏರಿಕೆಯಾಗಬೇಕುಬಸಮ್ಮ ಹಿರೇಮಠ ಸ್ಥಳೀಯ ನಿವಾಸಿ
38 ಸದಸ್ಯರ ಗ್ರಾ.ಪಂ
ಹನುಮಸಾಗರ ಗ್ರಾಮ ಪಂಚಾಯಿತಿ ಪ್ರಸ್ತುತ 14 ವಾರ್ಡ್ ಹಾಗೂ 38 ಸದಸ್ಯರನ್ನು ಒಳಗೊಂಡಿದೆ. ಈಗ ಮೇಲ್ದರ್ಜೆಗೇರಿರುವ ಕಾರಣ ಅಭಿವೃದ್ಧಿಯ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ. ಬಾಗಲಕೋಟೆ ಜಿಲ್ಲೆಯ ಗಡಿಭಾಗದ ಊರುಗಳ ಸಮೀಪದಲ್ಲಿಯೇ ಹನುಮಸಾಗರ ವ್ಯಾಪ್ತಿಯ ಊರುಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.