ADVERTISEMENT

ಕೊಪ್ಪಳ | ಹೆಲ್ಮೆಟ್‌ ಹಾಕದವರಿಗೆ ‘ಹೂ’ ಉಡುಗೊರೆ!

ಸಂಚಾರಿ ನಿಯಮದ ಕುರಿತು ವಿನೂತನ ಜಾಗೃತಿ ಮೂಡಿಸುತ್ತಿರುವ ಪಿಎಸ್‌ಐ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:58 IST
Last Updated 16 ಡಿಸೆಂಬರ್ 2025, 6:58 IST
   

ಯಲಬುರ್ಗಾ: ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ತಡೆಗಟ್ಟಲು ತಾಲ್ಲೂಕಿನ ಪೊಲೀಸ್ ಅಧಿಕಾರಿ ಯೊಬ್ಬರು ಲಾಟಿ ಬೀಸುವ ಕೈಯಲ್ಲಿ ಗುಲಾಬಿ ಹೂ ಹಿಡಿದು ಸವಾರರ ಮನ ಪರಿವರ್ತಿಸುವ ಕೆಲಸ ಮಾಡುತ್ತಿದ್ದಾರೆ. 

ತಾಲ್ಲೂಕಿನ ಬೇವೂರು ಗ್ರಾಮದ ಠಾಣೆಯಲ್ಲಿ ಈಚೆಗೆ ವರ್ಗಾವಣೆಗೊಂಡು ಪಿಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಪಿ. ನಾಯಕ ಅವರು ಜನರೊಂದಿಗೆ ಸ್ನೇಹಮಯ ವಾತಾವರಣ ನಿರ್ಮಿಸಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗುತ್ತಿದೆ. ಇದರಿಂದ ಅನೇಕ ಸವಾರರು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಳ್ಳಲು ಮನಸ್ಸು ಮಾಡುತ್ತಿರುವುದು ಕಂಡು ಬಂದಿದೆ.

ಪೊಲೀಸ್ ಎಂದಾಕ್ಷಣ ದರ್ಪ ದೌಲತ್ತು ಎದ್ದು ಕಾಣುವ ಪ್ರಸ್ತುತ ಸಂದರ್ಭ ದಲ್ಲಿ ಲಾಟಿ ಬದಲಿಗೆ ಕೈಯಲ್ಲಿ ಗುಲಾಬಿ ಹಿಡಿದು ವಾಹನ ಸವಾರರರನ್ನು ಸಂಪರ್ಕಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಸಂಚಾರ ನಿಯಮ ಪಾಲಿಸದಿದ್ದರೆ ಆಗಬಹುದಾದ ಹಾನಿ, ಪ್ರಾಣಹಾನಿ, ಆರ್ಥಿಕ ನಷ್ಟ ಹಾಗೂ ಕುಟುಂಬ ಎದುರಿಸಬಹುದಾದ ಕಷ್ಟ ಕಾರ್ಪಣ್ಯಗಳ ಬಗ್ಗೆ ಕೆಲ ಹೊತ್ತು ಪಾಠ ಮಾಡಿ ಅವರಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ.

ADVERTISEMENT

ಬೇವೂರು ಮಾರ್ಗವಾಗಿ ಕುಷ್ಟಗಿ, ಕೊಪ್ಪಳ ಹಾಗೂ ಯಲಬುರ್ಗಾ ಕಡೆಗೆ ಹೋಗುವ ಅನೇಕ ವಾಹನ ಸವಾರರರನ್ನು ತಡೆಗಟ್ಟಿ ಈ ರೀತಿಯ ಅರಿವು ಮೂಡಿಸುವ ಇವರ ಕೆಲಸಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ರಸ್ತೆಯಲ್ಲಿ ಹೆಚ್ಚೆಚ್ಚು ಓಡಾಡುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಿರು ವುದು ಕಂಡು ಬಂದಿದೆ.

ರಸ್ತೆ ಸಂಚಾರ ನಿಯಮ ಗಳನ್ನು ಉಲ್ಲಂಘಿಸುವ ಸವಾರ ರಿಗೆ ದಂಡ ವಿಧಿಸುವುದು ಸರ್ಕಾರದ್ದಾಗಲಿ, ಪೊಲೀಸ್ ಇಲಾಖೆಯ ಉದ್ದೇಶವಿಲ್ಲ, ಸವಾರರ ರಕ್ಷಣೆ ಮತ್ತು ಜೀವನ ಬಗ್ಗೆ ಇರುವ ಕಾಳಜಿಯಾಗಿದೆ. ಬದುಕಿಗಾಗಿ ಸಂಚಾರ ನಿಯಮಗಳನ್ನು ಪಾಲಿಸುವುದು ಅವಶ್ಯಕ ಎಂದು ಬೋಧಿಸುವ ನಾಯಕ ಅವರು ರೂಢಿಸಿಕೊಂಡಿರುವ ವಿನೂತನ ಮಾದರಿಯು ಜನರ ಮೇಲಿನ ಕಾಳಜಿ ಮತ್ತು ಮಮಕಾರ ಎದ್ದು ಕಾಣುತ್ತದೆ.

‘ಸಾಮಾನ್ಯವಾಗಿ ರಸ್ತೆ ಮಧ್ಯೆ ಪೊಲೀಸರು ಕಂಡರೆ ಭಯಗೊಂಡು ರಸ್ತೆ ಸಂಚಾರ ಬದಲಿಸುವ ಪ್ರಸ್ತುತ ಸಂದರ್ಭದಲ್ಲಿ ಈಗ ಕೆಲ ವಾಹನ ಸವಾರರರು ಹೆಲ್ಮೆಟ್ ಹಾಕಿಕೊಂಡು ಪೊಲೀಸರನ್ನು ಮಾತನಾಡಿಸಿ ಮುಂದಕ್ಕೆ ಹೋಗುತ್ತಿದ್ದಾರೆ’ ಎಂದು ಬೇವೂರು ಗ್ರಾಮದ ಉಮೇಶ ಬೇವಿನಮರದ, ಶರಣಬಸವರಾಜ ಕಾತರಕಿ ಇತರರು ಅಭಿಪ್ರಾಯ ಪಟ್ಟಿದ್ದಾರೆ.

ದಂಡ ವಸೂಲಿ ಮಾಡುವ ಮೂಲಕ ಜನರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರಿತು ಮೃದು ಧೋರಣೆಯ ಮೂಲಕ ಸುರಕ್ಷಿತ ಸಂಚಾರ ವ್ಯವಸ್ಥೆಗೆ ಒಳಪಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ಜನಸ್ನೇಹಿಯಾಗಿದೆ
ಮಲ್ಲನಗೌಡ ಕೋನನಗೌಡ, ಬೇವೂರ ಜೆಡಿಎಸ್ ಜಿಲ್ಲಾ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.