ADVERTISEMENT

ಹನುಮಸಾಗರ: ಮುಸ್ಲಿಂರಿಲ್ಲದ ಗ್ರಾಮದಲ್ಲಿ ಮೊಹರಂ!

ವಂತಿಗೆ ಸಂಗ್ರಹಿಸಿ ಪಂಜಾಗಳನ್ನು ಪ್ರತಿಷ್ಠಾಪಿಸುವ ಹಿಂದೂ ಜನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 15:18 IST
Last Updated 28 ಆಗಸ್ಟ್ 2020, 15:18 IST
ಹನುಮಸಾಗರ ಸಮೀಪದ ಗಡಚಿಂತಿ ಗ್ರಾಮದಲ್ಲಿ ಮೊಹರಂ ಪ್ರಯುಕ್ತ ಪೀರ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ
ಹನುಮಸಾಗರ ಸಮೀಪದ ಗಡಚಿಂತಿ ಗ್ರಾಮದಲ್ಲಿ ಮೊಹರಂ ಪ್ರಯುಕ್ತ ಪೀರ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ   

ಹನುಮಸಾಗರ:ಸಮೀಪದ ಗಡಚಿಂತಿ ಗ್ರಾಮದಲ್ಲಿ ಮುಸ್ಲಿಂ ಧರ್ಮದವರಿಲ್ಲ. ಆದರೂ, ಪ್ರತಿವರ್ಷ ಇಲ್ಲಿ ಮೊಹರಂ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಕೋವಿಡ್‌ ಕಾರಣ ಆಚರಣೆ ಕಳೆಗುಂದಿದ್ದು, ಸರಳವಾಗಿ ಆಚರಿಸಲಾಗುತ್ತಿದೆ.

ನಾಲ್ಕು ವರ್ಷಗಳ ಹಿಂದೆ ಗ್ರಾಮದಲ್ಲಿನ ಹಳೆ ದೇವಸ್ಥಾನ ಕೆಡವಿ ಸುಮಾರು ₹8 ಲಕ್ಷ ವೆಚ್ಚದಲ್ಲಿ ಹೊಸ ದೇವಸ್ಥಾನ ನಿರ್ಮಿಸಲಾಗಿದೆ. ಅಲ್ಲಿಯೇ ಪಂಜಾಗಳನ್ನುಪ್ರತಿಷ್ಠಾಪಿಸಲಾಗಿದೆ.

ಪ್ರತಿ ವರ್ಷ ಗ್ರಾಮಸ್ಥರೆಲ್ಲರೂ ವಂತಿಗೆ ಸಂಗ್ರಹಿಸಿ ಮೊಹರಂ ಆಚರಿಸುತ್ತಾರೆ. ದೇವಸ್ಥನಕ್ಕೆ ಸುಣ್ಣ–ಬಣ್ಣ ಬಳಿದು ಅಲಂಕರಿಸಿ, ಮೊಹರಂ ಪಂಜಾಗಳನ್ನು ಪ್ರತಿಷ್ಠಾಪಿಸುತ್ತಾರೆ.

ADVERTISEMENT

ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ. ಬೇಡಿಕೊಂಡ ಭಕ್ತರು ದೀರ್ಘ ದಂಡನಮಸ್ಕಾರ, ಸಕ್ಕರೆ ನೈವೇದ್ಯ ಹಾಗೂ ಛತ್ರಿದಾನದ ಮೂಲಕ ಹರಕೆ ಸಲ್ಲಿಸುತ್ತಾರೆ. ಗಂಧದ ಮೆರವಣಿಗೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಸಂಭ್ರಮದಿಂದ ನಡೆಸುತ್ತಾರೆ.

‘ನಮ್ಮ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಗ್ರಾಮದಲ್ಲಿರುವ ದೇವರುಗಳಿಗೆ ಸಲ್ಲುವಷ್ಟೇ ಭಕ್ತಿ ಮೊಹರಂ ದೇವರಿಗೂ ಸಲ್ಲುತ್ತದೆ’ ಎಂದು ಗ್ರಾಮದ ಮುಖಂಡ ಯಮನೂರಪ್ಪ ಅಬ್ಬಿಗೇರಿ ತಿಳಿಸಿದರು.

‘ಮೊಹರಂ ಸಂದರ್ಭದಲ್ಲಿ ಬೇರೆ ಊರಿನಿಂದ ಖಾಜಿಯವರನ್ನು ಕರೆಸುತ್ತೇವೆ. ಹಬ್ಬದ ಬಳಿಕ ಅವರಿಗೆ ಬಟ್ಟೆ, ದವಸ-ಧಾನ್ಯ ಹಾಗೂ ಹಣ ನೀಡು ಬೀಳ್ಕೊಡುತ್ತೇವೆ’ ಎಂದು ಗ್ರಾಮದ ಶರಣಪ್ಪಜ್ಜ ವಾಲಿಕಾರ ಹೇಳಿದರು.

ಮುಖಂಡರಾದ ಪರಸಪ್ಪಜ್ಜ, ಫಕೀರಪ್ಪಜ್ಜ, ಶರಣಪ್ಪ ದಂಡಿನ, ಶರಣಪ್ಪಜ್ಜ ಗರೇಬಾಳು, ಹನಮಪ್ಪ ರೋಣದ, ಹನಮಂತಪ್ಪ ವಾಲಿಕಾರ, ಯಲ್ಲಪ್ಪ ಗರೇಬಾಳು, ಹನಮಂತಪ್ಪ ಮಕಾಲಿ, ಯಮನಪ್ಪ ದಳಪತಿ, ಭೀಮಪ್ಪ ಭೋವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶರಣಪ್ಪ ಯರಗೇರಿ, ಹುಲಿಗೆಮ್ಮ ಪೂಜಾರಿ ಹಾಗೂ ಲಕ್ಷ್ಮವ್ವ ವಾಲಿಕಾರ ಅವರ ನೇತೃತ್ವದಲ್ಲಿ ಮೊಹರಂ ಆಚರಣೆ ನಡೆಯುತ್ತದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.