ಕೊಪ್ಪಳ ಹೋಳಿ
ಕೊಪ್ಪಳ: ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಕಣ್ಣು ಹಾಯಿಸಿದಷ್ಟೂ ದೂರ ಜನವೋ ಜನ. ಒಂದೆಡೆ ಯುವಕರ ತಂಡ, ಮತ್ತೊಂದೆಡೆ ಯುವತಿಯರ ತಂಡ. ಕಿವಿಗಡಚಿಕ್ಕುವ ಡಿ.ಜೆ. ಅಬ್ಬರದ ಸದ್ದಿನ ನಡುವೆ ಸುರಿಯುತ್ತಿದ್ದ ರೇನ್ ಡ್ಯಾನ್ಸ್‌ನಲ್ಲಿ ಕುಣಿತದ ಸಂಭ್ರಮ ಕಂಡುಬಂದಿತು.
ಪ್ರತಿ ವರ್ಷ ಹೋಳಿ ಹಬ್ಬ ಎಂದಾಕ್ಷಣ ಜವಾಹರ ರಸ್ತೆಯಲ್ಲಿ ಪ್ರಮುಖವಾಗಿ ಆಕರ್ಷಣೆ ಕಂಡುಬರುತ್ತಿತ್ತು. ಯುವಕರು ತಂಡೋಪತಂಡವಾಗಿ ಬಂದು ಕುಣಿದು ಸಂಭ್ರಮಿಸುತ್ತಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು, ಯುವತಿಯರು ಹಾಗೂ ಮಕ್ಕಳು ತಮ್ಮ ಓಣಿಗಳಲ್ಲಿ, ಸಮೀಪದ ಖಾಲಿ ಸ್ಥಳದಲ್ಲಿ ಪರಸ್ಪರ ಬಣ್ಣ ಎರಚಿ ಖುಷಿಪಡುತ್ತಿದ್ದರು.
ಮೊದಲ ಬಾರಿಗೆ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತಾಲ್ಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಹೋಳಿ ಉತ್ಸವ ಹಮ್ಮಿಕೊಂಡಿತ್ತು. ಜನರಿಗೆ ಸಂಘಟಕರೇ ಬಣ್ಣ ಕೊಟ್ಟು, ಕೃತಕ ಮಳೆಯ ವ್ಯವಸ್ಥೆ ಮಾಡಿ, ಪಾನೀಯ ಹಾಗೂ ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಹೀಗಾಗಿ ಜಿಲ್ಲಾಕೇಂದ್ರದಲ್ಲಿ ಈ ಬಾರಿಯೂ ಹೋಳಿ ಹಬ್ಬದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಬದಲಾಯಿತು. ಕಾಮನಬಿಲ್ಲಿನ ಬಣ್ಣಗಳ ಹಾಗೆ ತರಹೇವಾರಿ ಬಟ್ಟೆಗಳಿಂದ ಹೋಳಿ ಆಡುವ ಪ್ರದೇಶವನ್ನು ಅಲಂಕರಿಸಲಾಗಿತ್ತು. ದೊಡ್ಡ ದೊಡ್ಡ ಕೊಳವೆಗಳಲ್ಲಿ ಬಣ್ಣದ ನೀರನ್ನು ತುಂಬಿ ಜನರಿಗೆ ಸಿಡಿಸಲಾಯಿತು.
ಪುನೀತ್ ಸ್ಮರಣೆ: ಮಾರ್ಚ್ 17ರಂದು ದಿವಂಗತ ಪುನೀತ್ ರಾಜಕುಮಾರ್ ಜನ್ಮದಿನವಿರುವ ಕಾರಣ ಸಿನಿಮಾ ಮಂದಿರಗಳಲ್ಲಿ ‘ಅಪ್ಪು’ ಚಿತ್ರವನ್ನು ಮರು ಬಿಡುಗಡೆಮಾಡಲಾಗಿದೆ. ಅದೇ ನೆನಪಿನಲ್ಲಿ ಯುವಕರು ಅಪ್ಪು ಭಾವಚಿತ್ರ ಹಿಡಿದು ಕುಣಿದರು. ಅನೇಕರು ತಮ್ಮ ಗೆಳತಿಯ ಹೆಗಲ ಮೇಲೆ ಕುಳಿದರೆ, ಯುವಕರು ಅವರತ್ತಲೇ ಬಣ್ಣದ ಹೊಗೆ ಸಿಡಿಸಿ ಮತ್ತಷ್ಟು ಹುಮ್ಮಸ್ಸು ತುಂಬುತ್ತಿದ್ದರು. ಪುಂಡಾಟಿಕ ಪ್ರದರ್ಶಿಸಿದವರ ಮೇಲೆ ಪೊಲೀಸರು ಚಾಟಿ ಬೀಸಿದರು.
ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ರೇನ್ ಡ್ಯಾನ್ಸ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದವಾದರೂ ಜನ ಕ್ರೀಡಾಂಗಣದತ್ತ ಬರುತ್ತಲೇ ಇದ್ದ ಚಿತ್ರಣ ಕಂಡುಬಂದಿತು. ವಿಶೇಷವಾಗಿ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉಳಿದಂತೆ ವಿವಿಧ ಬಡಾವಣೆಗಳಲ್ಲಿ ನಿರ್ಮಿಸಲಾಗಿದ್ದು ‘ಕೃತಕ ಮಳೆ’ಯಲ್ಲಿ ಮಕ್ಕಳು, ಮಹಿಳೆಯರು ಕುಣಿದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ ಸೇರಿದಂತೆ ಅನೇಕರು ಬಣ್ಣದ ಸಡಗರದಲ್ಲಿ ಭಾಗಿಯಾದರು. ಅಭಿಮಾನಿಗಳು ಶಾಸಕ ಹಿಟ್ನಾಳ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದರು. ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಸ್ನೇಹಿತರ ಜೊತೆಗೂಡಿ ಹೋಳಿ ಸಂಭ್ರಮದಲ್ಲಿ ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.