ADVERTISEMENT

ಕುಷ್ಟಗಿ: ಹೋಳಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 15:47 IST
Last Updated 26 ಮಾರ್ಚ್ 2024, 15:47 IST
ಕುಷ್ಟಗಿಯಲ್ಲಿ ಮಹಿಳೆಯರು, ಮಕ್ಕಳು ಮಂಗಳವಾರ ಬಣ್ಣದ ಹಬ್ಬದ ಆಚರಣೆಯಲ್ಲಿ ತೊಡಗಿದ್ದು ಕಂಡುಬಂದಿತು
ಕುಷ್ಟಗಿಯಲ್ಲಿ ಮಹಿಳೆಯರು, ಮಕ್ಕಳು ಮಂಗಳವಾರ ಬಣ್ಣದ ಹಬ್ಬದ ಆಚರಣೆಯಲ್ಲಿ ತೊಡಗಿದ್ದು ಕಂಡುಬಂದಿತು   

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.

ಸೋಮವಾರ ಕಾಮದಹನದ ನಂತರ ಮಂಗಳವಾರ ಬಣ್ಣದ ಹಬ್ಬ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿ, ವೃತ್ತಗಳಲ್ಲಿ ಸಾರ್ವಜನಿಕರು ಪರಸ್ಪರ ಬಣ್ಣ ಎರಚುವುದು ಸಾಮಾನ್ಯವಾಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದರಿಂದ ಪಟ್ಟಣ ಅಘೋಷಿತ ಬಂದ್‌ನಂತೆ ಕಂಡುಬಂದಿತು.

ಈ ಬಾರಿ ಪುರುಷರಿಗಿಂತ ಮಹಿಳೆಯರು, ಮಕ್ಕಳು, ವಿವಿಧ ಮಹಿಳಾ ಸಂಘಟನೆಗಳು ಉಲ್ಲಾಸದೊಂದಿಗೆ ಓಕುಳಿ ಹಬ್ಬದಲ್ಲಿ ಮಿಂದೆದ್ದರು. ಆದರೆ ಬಹುತೇಕ ಕಡೆಗಳಲ್ಲಿ ಬಣ್ಣದ ಹಬ್ಬದ ನೆಪದಲ್ಲಿ ರಾಸಾಯನಿಕಗಳು, ಸುಟ್ಟ ಎಂಜಿನ್‌ ಆಯಿಲ್ ಬಳಕೆ ಮಾಡಿದ ದೃಶ್ಯಗಳೂ ಕಂಡುಬಂದವು.

ADVERTISEMENT

ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನ ಮನೆ ಬಿಟ್ಟು ಹೊರಗೆ ಬರಲಿಲ್ಲ. ಅಲ್ಲದೆ ನೀರಿನ ಕೊರತೆಯೂ ಬಣ್ಣದ ಹಬ್ಬದ ಮೇಲೆ ಪರಿಣಾಮ ಬೀರಿದೆ ಎಂದು ಜನರು ಹೇಳಿದರು.

ಕುಷ್ಟಗಿ ತಹಶೀಲ್ದಾರ್ ಕಚೇರಿ ಮುಂದಿನ ರಸ್ತೆ ಮಧ್ಯೆ ಕಾಮದಹನ ನಡೆಸಿರುವುದು

ರಸ್ತೆಯಲ್ಲೇ ಕಾಮದಹನ ಪೊಲೀಸರ ಮೌನ

ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿಯೇ ಕಟ್ಟಿಗೆ ಟೈರ್‌ ಪ್ಲಾಸ್ಟಿಕ್‌ ವಸ್ತುಗಳನ್ನು ಗುಡ್ಡೆಹಾಕಿ ಬೆಂಕಿ ಹಚ್ಚಿ ಕಾಮದಹನ ನಡೆಸಿದ್ದರಿಂದ ಡಾಂಬರ್‌ ಕಾಂಕ್ರೀಟ್‌ ರಸ್ತೆಗಳು ಹಾಳಾದವು. ಮಲ್ಲಯ್ಯ ವೃತ್ತ ಕನಕವೃತ್ತ ಮುರುಡಿ ಭೀಮಜ್ಜ ವೃತ್ತ ಟಿಪ್ಪು ಸುಲ್ತಾನ್ ವೃತ್ತ ಹಳೆ ಬಜಾರ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಲ್ಲಿ ಯುವಕರು ಕಾಮದಹನದ ನೆಪದಲ್ಲಿ ಇಂಥ ವಿಕೃತಿ ಮೆರೆದದ್ದು ಕಂಡುಬಂದಿತು. ಅಪಾಯಕಾರಿ ರೀತಿಯಲ್ಲಿ ಬೆಂಕಿ ಕೆನ್ನಾಲಿಗೆಯಿಂದ ರಸ್ತೆಯಲ್ಲಿನ ವಾಹನ ಸವಾರರು ಪರದಾಡುವಂತಾಗಿತ್ತು. ಆದರೂ ಲೋಕೋಪಯೋಗಿ ಪುರಸಭೆ ಮತ್ತು ಪೊಲೀಸ್‌ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು ಎಷ್ಟು ಸರಿ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.