ADVERTISEMENT

ಕೊಪ್ಪಳ | ಕಾರ್ಖಾನೆ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ: ಬಸವರಾಜ ರಾಯರಡ್ಡಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 12:35 IST
Last Updated 20 ಫೆಬ್ರುವರಿ 2025, 12:35 IST
ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ   

ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪ ಬಲ್ಡೋಟಾ ಸ್ಟೀಲ್‌ ಮತ್ತು ಪವರ್ ಲಿಮಿಟೆಡ್ (ಬಿಎಸ್‌ಪಿಎಲ್‌) ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನುಮತಿ ನೀಡಿದ್ದು, ಇದರಿಂದ ಜಿಲ್ಲಾಕೇಂದ್ರದ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಕಾರ್ಖಾನೆ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಈ ಕುರಿತು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗೆ ಗುರುವಾರ ಪತ್ರ ಬರೆದಿರುವ ಅವರು ‘ಸೋಮವಾರ ಕೊಪ್ಪಳ ಬಂದ್‌ಗೆ ಕರೆ ನೀಡಿರುವ ವಿಚಾರದಲ್ಲಿ ನೀವು ತೋರಿರುವ ನಡೆ ಸ್ವಾಗತಾರ್ಹ. ಈ ಬಂದ್‌ಗೆ ನನ್ನ ಬೆಂಬಲವಿದೆ. ನನ್ನ ಕ್ಷೇತ್ರದ ಜನರ ಬೆಂಬಲವೂ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.

‘ಕಾರ್ಖಾನೆ ಸ್ಥಾಪನೆ ಮಾಡಿದರೆ ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪರಿಸರಕ್ಕೆ ಹಾನಿಯಾಗುತ್ತದೆ, ಜಾನುವಾರುವಿನ ಮೇಲೂ ಪರಿಣಾಮ ಬೀರುತ್ತದೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿ ಮುಖ್ಯಮಂತ್ರಿ ಜೊತೆ ಚರ್ಚಿಸಿ ಕಾರ್ಖಾನೆ ಸ್ಥಳಾಂತರಕ್ಕೆ ಕ್ರಮ ವಹಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.