ADVERTISEMENT

ಮೂಲ ಸೌಕರ್ಯ: ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಭಕ್ತರಿಗೆ ಸಿಹಿ ಸುದ್ದಿ

ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಯೋಜನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:16 IST
Last Updated 13 ಜನವರಿ 2026, 6:16 IST
ಹುಲಿಗಿ ಹುಲಿಗೆಮ್ಮ ದೇವಿ ದರ್ಶನಕ್ಕೆ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು 
ಹುಲಿಗಿ ಹುಲಿಗೆಮ್ಮ ದೇವಿ ದರ್ಶನಕ್ಕೆ ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು    

ಕೊಪ್ಪಳ: ಉತ್ತರ ಕರ್ನಾಟಕದ ಶಕ್ತಿ ದೇವತೆ ಎಂದೇ ಖ್ಯಾತಿಯಾದ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಹುಲಿಗೆಮ್ಮದೇವಿ ದರ್ಶನ ಪಡೆಯಲು ಬರುತ್ತಾರೆ. ಅದರಲ್ಲಿ ಅನೇಕರು ಸಮೀಪದ ತುಂಗಭದ್ರಾ ನದಿಯಲ್ಲಿ ಮಿಂದು ಅಲ್ಲಿಯೇ ಅಡುಗೆ ತಯಾರಿಸಿ ನೈವೇದ್ಯ ಸಮರ್ಪಿಸುವುದು ಸಂಪ್ರದಾಯ. ದೇವಸ್ಥಾನಕ್ಕೆ ಬರುವವರಲ್ಲಿ ಬಹುತೇಕರು ಬಡವರು ಹಾಗೂ ಮಧ್ಯಮ ವರ್ಗದವರೇ ಇರುವುದರಿಂದ ಅವರಿಗೆ ಉಳಿದುಕೊಳ್ಳಲು ಕಡಿಮೆ ಬೆಲೆಗೆ ಕೊಠಡಿಗಳು ಅಗತ್ಯ ಇವೆ.

ದೇವಸ್ಥಾನದ ಸುತ್ತಲಿನ ಪ್ರಾಂಗಣ, ಭಕ್ತರ ಸರಾಗ ದರ್ಶನಕ್ಕೆ ವ್ಯವಸ್ಥೆ, ಲಕ್ಷಾಂತರ ಭಕ್ತರು ಬಂದರೂ ಯಾವುದೇ ಗಲಾಟೆಗೆ ಆಸ್ಪದ ಇಲ್ಲದಂತೆ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಇದಕ್ಕಾಗಿ ಹುಲಿಗೆಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರ ರೂಪಿಸಿರುವ ಮಾಸ್ಟರ್‌ ಪ್ಲ್ಯಾನ್‌ಗೆ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಲಭಿಸಿದೆ. ಈಗ ಕೊಠಡಿಗಳ ಕೊರತೆ ಇರುವ ಕಾರಣ ಭಕ್ತರು ದೇವಸ್ಥಾನದ ವಿಶಾಲವಾದ ಜಾಗದಲ್ಲಿಯೇ ಮಲಗುತ್ತಾರೆ. 

ADVERTISEMENT

ವಸತಿ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಹುಲಿಗಿಯಲ್ಲಿ ಈಗಾಗಲೇ ’ಅಮ್ಮ ನಿಲಯ’ ಹೆಸರಿನಲ್ಲಿ 40 ಕೊಠಡಿಗಳನ್ನು ನಿರ್ಮಿಸಲಾಗಿದೆ. ಒಂದು ಕೊಠಡಿಯಲ್ಲಿ ಮೂರ್ನಾಲ್ಕು ಜನ ಉಳಿದುಕೊಳ್ಳಲು ಅವಕಾಶವಿದ್ದು, ಸಾಮಾನ್ಯವಾಗಿ ಹುಲಿಗಿಗೆ ಬರುವ ಒಂದು ಕುಟುಂಬಕ್ಕೆ ಪ್ರತ್ಯೇಕ ಕೊಠಡಿ ನೀಡಲಾಗುತ್ತದೆ. ಆ ಕಟ್ಟಡದ ಎರಡು ಹಾಗೂ ಮೂರನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಟ್ಟಡದ ಮೇಲಂತಸ್ತು ಪೂರ್ಣಗೊಂಡರೆ ಇನ್ನು 60 ಕೊಠಡಿಗಳು ನಿರ್ಮಾಣವಾಗುತ್ತವೆ. ಇದರಲ್ಲಿ 60 ಕುಟುಂಬಗಳು ಅಥವಾ 180ರಿಂದ 200 ಜನ ಇರಲು ಅನುಕೂಲವಾಗಲಿದೆ.

ಭಕ್ತರ ಅನುಕೂಲಕ್ಕಾಗಿ ಮೂಲವಾಗಿ ಬೇಕಾಗಿರುವ ಶೌಚಾಲಯಗಳನ್ನು ದೇವಸ್ಥಾನದ ಸಮೀಪದ ತುಂಗಭದ್ರಾ ನದಿಯ ಸಮೀಪದಲ್ಲಿ ನಿರ್ಮಿಸಲು ₹3.4 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್‌ ಆಗಿದ್ದು, ಎಜೆನ್ಸಿ ನಿಗದಿಯಾಗಬೇಕಾಗಿದೆ. ಇವುಗಳ ಜೊತೆಗೆ ದೇವಸ್ಥಾನದ ಉತ್ತರ ದಿಕ್ಕಿನಲ್ಲಿರುವ ಖಾಲಿ ಪ್ರದೇಶ ಹಾಗೂ ವಾಹನ ನಿಲುಗಡೆಯ ಪ್ರದೇಶದಲ್ಲಿ ಎರಡು ಸುಲಭ ಶೌಚಾಲಯ ಬ್ಲ್ಯಾಕ್‌ಗಳನ್ನು ನಿರ್ಮಿಸಲು ಒಪ್ಪಿಗೆ ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮ್ಮ ನಿಲಯದಲ್ಲಿ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸಲು ಅನುಮೋದನೆ ಲಭಿಸಿದ್ದು ಕೆಲಸ ಪೂರ್ಣಗೊಂಡ ಬಳಿಕ ಭಕ್ತರಿಗೆ ಮತ್ತಷ್ಟು ಅನುಕೂಲವಾಗುತ್ತದೆ.

–ಎಂ.ಎಚ್‌. ಪ್ರಕಾಶರಾವ್‌ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ

ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದು ಅವರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗುತ್ತಿದೆ.

–ರಾಘವೇಂದ್ರ ಹಿಟ್ನಾಳ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.