
ಕೊಪ್ಪಳ: ಬಲ್ಡೋಟಾ ಗ್ರೂಪ್‌ನ ಸಂಸ್ಥೆಯಾದ ಎಂಎಸ್‌ಪಿಎಲ್ ಕೈಗಾರಿಕೆ ಒಳಗೊಂಡಂತೆ ಇತರೆ ಕೈಗಾರಿಕೆಗಳಿಂದ ಮಾಲಿನ್ಯದ ಕುರಿತು ಈಗಾಗಲೇ ಒಂದಷ್ಟು ಅಧ್ಯಯನ ಮಾಡಲಾಗಿದ್ದು, ಈಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್) ಸಂಸ್ಥೆ ಅಧ್ಯಯನ ನಡೆಸುತ್ತಿದೆ. ಈ ವರದಿ 15 ದಿನಗಳಲ್ಲಿ ಬರಲಿದ್ದು, ಬಳಿಕ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವಿಧಾನಪರಿಷತ್‌ನಲ್ಲಿ ಗುರುವಾರ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ್ದಕ್ಕೆ ಲಿಖಿತ ಉತ್ತರ ನೀಡಿರುವ ಅವರು ‘ಕೈಗಾರಿಕೆಗಳ ಮಾಲಿನ್ಯದಿಂದ ಕೊಪ್ಪಳ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಅಧ್ಯಯನ ಮಾಡಲು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸೂಚನೆಯಂತೆ ಇದೇ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿ ಮತ್ತು ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು’ ಎಂದು ಹೇಳಿದ್ದಾರೆ.
‘ಈ ತಜ್ಞರ ತಂಡ 2024ರ ಡಿ. 11ರಿಂದ 13ರ ತನಕ ಕೊಪ್ಪಳ ತಾಲ್ಲೂಕಿನ ಕೈಗಾರಿಕೆಗಳಿಗೆ ಭೇಟಿ ನೀಡಿ ಸಮಿತಿ ಒಂದಷ್ಟು ವರದಿಗಳನ್ನು ನೀಡಿದೆ. ತಜ್ಞರ ಸಮಿತಿ ನೀಡಿದ ವರದಿಯನ್ವಯ ಕ್ರಮ ಕೈಗೊಳ್ಳಲು ಅವರು ರಾಜ್ಯ ಸರ್ಕಾರವನ್ನು ಕೋರಿದ್ದಾರೆ. ಬಳಿಕ ವಾಣಿಜ್ಯ, ಕೈಗಾರಿಕಾ ಇಲಾಖೆಯು 2025ರ ಆಗಸ್ಟ್ 5ರಲ್ಲಿ ತಜ್ಞರ ಸಮಿತಿಯ ವರದಿಯನ್ನು ಜಿಲ್ಲಾಡಳಿತಕ್ಕೆ ಕಳಿಸಿದ್ದು ಶಿಫಾರಸುಗಳನ್ನು ಪರಿಶೀಲಿಸಿ ಅನುಷ್ಠಾನ ಮಾಡುವಂತೆ ತಿಳಿಸಲಾಗಿದೆ’ ಎಂದು ಉತ್ತರ ನೀಡಿದರು. ಈ ಸಮಿತಿ ಮಾಲಿನ್ಯ ನಿಯಂತ್ರಣಕ್ಕೆ ಒಂದಷ್ಟು ಕಿರು ಮತ್ತು ದೀರ್ಘ ಅವಧಿಯಲ್ಲಿ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಬಗ್ಗೆ ಶಿಫಾರಸು ಮಾಡಿದೆ.
ಈ ಎಲ್ಲ ಬೆಳವಣಿಗೆಗಳ ಬಳಿಕ ಇದೇ ವರ್ಷದ ಸೆಪ್ಟೆಂಬರ್ 2ರಂದು ₹49.82 ಲಕ್ಷ ಮೊತ್ತದಲ್ಲಿ ಬಲ್ಡೋಟಾ ಸ್ಟೀಲ್ ಪ್ಲಾಂಟ್ ಲಿಮಿಟೆಡ್ ವಿಸ್ತರಣೆ ಕುರಿತು ಮಾಲಿನ್ಯ ನಿಯಂತ್ರಣ ಕ್ರಮಗಳ ಮೌಲ್ಯಮಾಪನದ ಬಗ್ಗೆ ವರದಿ ನೀಡುವಂತೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದೆ. ಸಂಸ್ಥೆ ಅಧ್ಯಯನ ನಡೆಸುತ್ತಿದ್ದು, ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಸಚಿವರು ಪರಿಷತ್‌ನಲ್ಲಿ ಉತ್ತರ ನೀಡಿದ್ದಾರೆ.
ಬಲ್ಡೋಟಾ ಕಂಪನಿಯವರು ಕೆರೆಯ ಮೂಲ ಸ್ವರೂಪವನ್ನು ಹಾಳು ಮಾಡಿದ್ದು, ಜಾನುವಾರುಗಳಿಗೆ ನೀರು ಕುಡಿಯಲು ಬಿಡುತ್ತಿಲ್ಲ ಎಂದು ಹೇಮಲತಾ ನಾಯಕ ಗಮನಕ್ಕೆ ತಂದಾಗ ಪರಿಶೀಲಿಸಿ ಜಾನುವಾರುಗಳಿಗೆ ಅನುವು ಮಾಡಿಕೊಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು ಎಂದು ಸಚಿವರು ಪ್ರತಿಕ್ರಿಯೆ ನೀಡಿದರು.
ಬಲ್ದೋಟಾ ಘಟಕಕ್ಕೆ ಕೇಂದ್ರ ಸರ್ಕಾರವೇ ಎಲ್ಲ ರೀತಿಯ ಅನುಮತಿ ನೀಡಿದೆ. ಮಾಲಿನ್ಯ ನಿಯಂತ್ರಣ ನಿಯಮ ಪಾಲಿಸಿದರಷ್ಟೇ ಕಾರ್ಯಚರಣೆಗೆ ಅವಕಾಶ ನೀಡುತ್ತೇವೆ. ಗವಿಮಠದ ಸ್ವಾಮೀಜಿಯನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವೆ.ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ
ಬಲ್ಡೋಟಾ ತನ್ನ ಆವರಣದಲ್ಲಿರುವ ಕೆರೆಯ ಮೂಲಸ್ವರೂಪವನ್ನು ಹಾಳು ಮಾಡಿದೆ. ಜಾನುವಾರುಗಳು ನೀರು ಕುಡಿಯಲು ಕೂಡ ಬಿಡುತ್ತಿಲ್ಲ. ಇದನ್ನು ಹೇಗೆ ಒಪ್ಪಿಕೊಳ್ಳಬೇಕು.ಹೇಮಲತಾ ನಾಯಕ ವಿಧಾನಪರಿಷತ್ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.