ADVERTISEMENT

ಆನೆಗೊಂದಿ, ಹನುಮನಹಳ್ಳಿ, ರಂಗಾಪುರದ ಅನಧಿಕೃತ ರೆಸಾರ್ಟ್‌ ತೆರವು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 7:14 IST
Last Updated 29 ಅಕ್ಟೋಬರ್ 2025, 7:14 IST
ಆನೆಗೊಂದಿ ಗ್ರಾಮದಲ್ಲಿ ಅನಧಿಕೃತವಾಗಿ ನಿರ್ಮಿಸಿದ ರೆಸಾರ್ಟ್‌ವೊಂದನ್ನು ತೆರವುಗೊಳಿಸಿರುವುದು
ಆನೆಗೊಂದಿ ಗ್ರಾಮದಲ್ಲಿ ಅನಧಿಕೃತವಾಗಿ ನಿರ್ಮಿಸಿದ ರೆಸಾರ್ಟ್‌ವೊಂದನ್ನು ತೆರವುಗೊಳಿಸಿರುವುದು   

ಗಂಗಾವತಿ (ಕೊಪ್ಪಳ ಜಿಲ್ಲೆ): ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತಾಲ್ಲೂಕಿನ ಆನೆಗೊಂದಿ, ಹನುಮನಹಳ್ಳಿ, ರಂಗಾಪುರ ಹಾಗೂ ಸಾಣಾಪುರ ಗ್ರಾಮಗಳಲ್ಲಿ ಅನಧಿಕೃತ ರೆಸಾರ್ಟ್‌ಗಳನ್ನು ಮಂಗಳವಾರ ತೆರವುಗೊಳಿಸಲಾಯಿತು.

ಬೆಳಿಗ್ಗೆ ತಾಲ್ಲೂಕಾಡಳಿತ, ಕಂದಾಯ, ಪೊಲೀಸ್ ಇಲಾಖೆ, ಜೆಸ್ಕಾಂ, ಗ್ರಾ.ಪಂ ಸಿಬ್ಬಂದಿಯು ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಆನೆಗೊಂದಿಯಿಂದ ರೆಸಾರ್ಟ್ ತೆರವು ಕಾರ್ಯಾಚರಣೆ ಆರಂಭಿಸಿದರು. ಮೊದಲಿಗೆ ಕಾರ್ಯಾಚರಣೆ ನಡೆಸಲು ಮುಂದಾದಾಗ ಮಾಲೀಕರು ಸ್ವಯಂ ತೆರವಿಗೆ ಅವಕಾಶ ನೀಡುವಂತೆ ಅಧಿಕಾರಿಗಳನ್ನು ಕೋರಿದರು.

ನ್ಯಾಯಾಲಯದ ಆದೇಶವಿರುವ ಕಾರಣ ತೆರವು ಮಾಡಲೇಬೇಕು ಎಂದು ಅಧಿಕಾರಿಗಳು ತಿಳಿಸಿದಾಗ ಮಾಲೀಕರು ಹಿಂದೆ ಸರಿದರು. ಜೆಸಿಬಿಗಳು ರೆಸಾರ್ಟ್‌ನ ಕಟ್ಟಡ ಮತ್ತು ಗುಡಿಸಲುಗಳನ್ನು ನೆಲಸಮ ಮಾಡಿದವು. ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ರೆಸಾರ್ಟ್ ಮಾಲೀಕರು ಕೆಲ ಅಗತ್ಯ ವಸ್ತುಗಳನ್ನು ಹೊರ ತೆಗೆದರು.

ADVERTISEMENT

ಆನೆಗೊಂದಿ, ಹನುಮನಹಳ್ಳಿ, ರಂಗಾಪುರ ಹಾಗೂ ಸಾಣಾಪುರ ಗ್ರಾಮದಲ್ಲಿ 6 ಅನಧಿಕೃತ ರೆಸಾರ್ಟ್‌ನ ಗುಡಿಸಲು ಹಾಗೂ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಒಂದು ರೆಸಾರ್ಟ್‌ನ ವಿಷಯ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ರಮೇಶ ವಟ್ಗಲ್ ಮಾತನಾಡಿ, ‘ಆನೆಗೊಂದಿ ಭಾಗದ ಬಹುತೇಕ ಕಂದಾಯ ಜಮೀನುಗಳಲ್ಲಿ ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಕಟ್ಟಡ, ರೆಸಾರ್ಟ್, ಗುಡಿಸಲು ನಿರ್ಮಿಸಲಾಗಿದೆ’ ಎಂದರು.

‘ಇಂಥ ಕಟ್ಟಡಗಳ‌ ನಿರ್ಮಾಣದಿಂದ ವಿಜಯನಗರ ಕಾಲದ ಐತಿಹಾಸಿಕ ಸ್ಥಳಗಳಿಗೆ ಧಕ್ಕೆ ಉಂಟಾಗುತ್ತದೆ. ನಿಸರ್ಗ ಹಾಳಾಗಲಿದೆ. ಆದರೂ ಕೆಲವರು ಅನಧಿಕೃತವಾಗಿ ರೆಸಾರ್ಟ್ ನಿರ್ಮಿಸಿಕೊಂಡು ನಡೆಸುತ್ತಿದ್ದಾರೆ. ವಿದ್ಯುತ್ ಸಂಪರ್ಕಕ್ಕೆ ಅವಕಾಶ ಇಲ್ಲದಿದ್ದರೂ ರೆಸಾರ್ಟ್ ಮಾಲೀಕರು ಕೋರ್ಟ್ ಮೊರೆ ಹೋಗಿದ್ದಾರೆ’ ಎಂದು ಹೇಳಿದರು.

‘ಕೋರ್ಟ್‌ನ ಆದೇಶದನ್ವಯ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನೂ 16 ಅನಧಿಕೃತ ರೆಸಾರ್ಟ್‌ಗಳ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದೇಶ ಬಂದರೆ ಅವುಗಳನ್ನೂ ತೆರವು ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್ ಯು.ನಾಗರಾಜ, ಗ್ರಾಮೀಣ ಠಾಣೆ ಪಿಐ ರಂಗಪ್ಪ ದೊಡ್ಡಮನಿ ಸೇರಿದಂತೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ತಾಲ್ಲೂಕಾಡಳಿತ, ಕಂದಾಯ, ಜೆಸ್ಕಾಂ, ಆನೆಗೊಂದಿ, ಸಾಣಾಪುರ ಗ್ರಾ.ಪಂ ಪಿಡಿಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಆನೆಗೊಂದಿ ಗ್ರಾಮದಲ್ಲಿ ಅನಧಿಕೃತವಾಗಿ ನಿರ್ಮಿಸಿದ ರೆಸಾರ್ಟ್‌ವೊಂದನ್ನು ತೆರವು ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.