ADVERTISEMENT

ಕೊಪ್ಪಳ: ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಪ್ರಭಾವಿಗಳಿಂದ ದಂಧೆ

ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡರೂ ಪ್ರಭಾವಿಗಳಿಂದ ದಂಧೆ

ಸಿದ್ದನಗೌಡ ಪಾಟೀಲ
Published 18 ಜನವರಿ 2020, 19:45 IST
Last Updated 18 ಜನವರಿ 2020, 19:45 IST
ಕೊಪ್ಪಳ ತಾಲ್ಲೂಕಿನ ಕಾಸನಕಂಡಿ ಬಳಿ ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಲ್ಲಿ ಗುಡ್ಡವನ್ನೇ ಕರಗಿಸಿರುವ ಅಕ್ರಮ ಗಣಿದಾರರು
ಕೊಪ್ಪಳ ತಾಲ್ಲೂಕಿನ ಕಾಸನಕಂಡಿ ಬಳಿ ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಲ್ಲಿ ಗುಡ್ಡವನ್ನೇ ಕರಗಿಸಿರುವ ಅಕ್ರಮ ಗಣಿದಾರರು   

ಕೊಪ್ಪಳ: ಜಿಲ್ಲೆಯಲ್ಲಿ ನಡೆದಿರುವ ಕಲ್ಲು, ಮರಳು, ಮುರುಮ್ ಸೇರಿದಂತೆ ವಿವಿಧ ಖನಿಜಗಳ ಅಕ್ರಮ ಗಣಿಗಾರಿಕೆ ತಡೆಯಲು ಜಿಲ್ಲಾಡಳಿತ ಏನೆಲ್ಲಾ ಕ್ರಮ ಕೈಗೊಂಡಿದ್ದರೂ ಸಹಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಇಂದಿಗೂಎಗ್ಗಿಲ್ಲದೆ ಮುಂದುವರಿದೆ.

ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆದಾರರ ವಿರುದ್ಧ ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡು ದಂಡವಿಧಿಸಿದ್ದರೂ ಸಹ ಜಿಲ್ಲೆಯ ಕೆಲ ರಾಜಕೀಯ ಪ್ರಭಾವಿ ವ್ಯಕ್ತಿಗಳು, ಬೆಂಬಲಿಗರು ದಂಡದ ಭಯವಿಲ್ಲದೆ ಅಕ್ರಮವಾಗಿ ಮರಳು, ಮುರುಮ್, ಕಲ್ಲು, ಕ್ರಷರ್, ವಿವಿಧ ಖನಿಜಗಳ ಗಣಿಗಾರಿಕೆ ಮತ್ತು ಸಾಗಣೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಸರ್ಕಾರದ ವಿವಿಧ ಕಾಮಗರಿಗಳಿಗೆ ಸೇರಿದಂತೆ ಇತರೆ ಕಾಮಗಾರಿಗಳಿಗೆ ಗುತ್ತಿಗೆದಾರರು ಸರ್ಕಾರದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾಯ್ದೆ, ನಿಯಾಮವಳಿಗಳಂತೆ ಪರವಾನಿಗೆ ಪಡೆಯದೆ, ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದಿದ್ದು, ರಾಜಧನ ವಂಚನೆಯ ಜೊತೆಗೆ ಜನತೆಗೂ ತಲೆ ನೋವಾಗಿ ಪರಿಣಮಿಸಿದ್ದಾರೆ.ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಸಚಿವ ಸಿ.ಸಿ.ಪಾಟೀಲ ಅವರಿಗೆ ದೂರು ನೀಡಲಾಗಿದೆ.

ADVERTISEMENT

ಇತ್ತೀಚಿಗೆ ಯಲಬುರ್ಗಾ ತಾಲೂಕಿನಲ್ಲಿ ಅಕ್ರಮವಾಗಿ ಮುರುಮ್ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗಿದೆ. ಆದರೂ ಅಭಿವೃದ್ಧಿ ಹೆಸರಿನಲ್ಲಿ ಅಧಿಕೃತ ಪರವಾನಿಗೆ ಪಡೆಯದೇ ಅವಶ್ಯಕತೆಗಿಂತ ಹೆಚ್ಚು ಮಣ್ಣು ಸಾಗಿಸಿರುವುದು ಕಂಡು ಬಂದಿದೆ.ಇದರಿಂದಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಬರುವ ರಾಜಧನಕ್ಕೆ ಕೊಕ್ಕೆ ಬಿದ್ದಿದೆ.

ಕಂದಾಯ, ಗಣಿ, ಪೊಲೀಸ್ ಇಲಾಖೆ ಜಾಣ ಮೌನ ವಹಿಸಿದ್ದಾರೆ. ಅಕ್ರಮ ಗಮನಕ್ಕೆ ಬರುತ್ತಿದ್ದಂತೆ ಪರಿಶೀಲನೆ ನಡೆಸಿದೂರು ದಾಖಲಿಸಲು ಚಿಂತನೆ ನಡೆಸಿದ್ದಾರೆ. ಕೊಪ್ಪಳ ತಾಲ್ಲೂಕು ವ್ಯಾಪ್ತಿಯ ಕಾಸನಕಂಡಿ, ಹಿರೇಬಗನಾಳ, ಅಳವಂಡಿ, ಹಾಲವರ್ತಿ, ಕೇರಳ್ಳಿಭಾಗದಲ್ಲಿ ಹೆಚ್ಚು ಅಕ್ರಮ ನಡೆಯುತ್ತಿರುವುದು ಕಂಡು ಬಂದಿದೆ.

ಈ ಅಕ್ರಮದ ಬಗ್ಗೆ ಜಿಲ್ಲಾಡಳಿತ ಗಂಭೀರವಾದ ಪ್ರಯತ್ನ ನಡೆಸಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅಕ್ರಮ ತಡೆಗೆ ದೂರು ದಾಖಲಿಸಿ ದಂಡ ವಸೂಲಿಗೆ ಮುಂದಾಗಿದೆ.

'ಗಣಿಗಾರಿಕೆ ಘಟಕ ಬಂದ್ ಮಾಡಿದರೆ ನಷ್ಟ ಉಂಟಾಗುತ್ತದೆ. ನಾವು ರಾಜಧನ ಕಟ್ಟಿ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುತ್ತಿದ್ದೇವೆ. ಅಕ್ರಮ ನಡೆಸಿದ್ದರೆ, ಆ ಅಕ್ರಮಕ್ಕೆ ತಕ್ಕ ದಂಡ ವಿಧಿಸಲಿ. ಒಮ್ಮೆಲೆ ಬಂದ್ ಮಾಡಬಾರದು' ಎಂದು ಗಣಿಗಾರಿಕೆ ನಡೆಸುವ ಉದ್ಯಮಿಗಳು ಮಾರ್ಮಿಕವಾಗಿ ಹೇಳುತ್ತಾರೆ.

ಹೊಸ ಗಣಿ ಮರಳು ನೀತಿ ತರುತ್ತೇವೆ ಎಂದು ಕಳೆದ ಮೂರು ವರ್ಷದಿಂದ ಮೂರು ಸರ್ಕಾರಗಳು ಹೇಳುತ್ತಾ ಬಂದಿದ್ದರೂ ಯಾವುದೇ ಹೊಸ ನೀತಿ ಬಾರದೇ ಇರುವುದರಿಂದ ಅಕ್ರಮ ಹಾಗೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.