
ಹೆಣ್ಣು ಶಿಶು
ಕೊಪ್ಪಳ: ಅಸಹಜ ಹುಟ್ಟಿನಿಂದಾಗಿ ಸಾವು–ಬದುಕಿನ ನಡುವೆ ಹೋರಾಟ ನಡೆಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಇಲ್ಲಿಂದ ‘ಝೀರೊ ಟ್ರಾಫಿಕ್’ನಲ್ಲಿ ಸಾಗಿಸಲಾಗಿದ್ದ ನವಜಾತ ಗಂಡು ಶಿಶು ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ರಾತ್ರಿ ಮೃತಪಟ್ಟಿದೆ.
ಜಿಲ್ಲೆಯ ಕುಕನೂರು ತಾಲ್ಲೂಕಿನ ಬೂದಗುಂಪಾ ಗ್ರಾಮದ ವಿಜಯಲಕ್ಷ್ಮೀ ಎಂಬುವವರಿಗೆ ಶನಿವಾರ ಮಧ್ಯರಾತ್ರಿ ಸಹಜ ಹೆರಿಗೆಯಾಗಿತ್ತು. ನವಜಾತ ಶಿಶುವಿಗೆ ಹೊಟ್ಟೆ ಮೇಲಿನ ಚರ್ಮ ಸರಿಯಾಗಿ ಬೆಳೆಯದ ಕಾರಣ ಶಿಶುವಿನ ಕರುಳು, ಕಿಡ್ನಿ ಹೊರಗಡೆ ಬಂದಿದ್ದವು. ಇಲ್ಲಿನ ಆಂಬುಲೆನ್ಸ್ ಸಿಬ್ಬಂದಿ 120 ಕಿ.ಮೀ. ದೂರವನ್ನು 60 ನಿಮಿಷಗಳಲ್ಲಿ ಕ್ರಮಿಸಿ ಮಗುವನ್ನು ಹುಬ್ಬಳ್ಳಿಗೆ ತಲುಪಿಸಿದ್ದರು.
‘ಶಿಶುವಿನ ಹೊಟ್ಟೆಯ ಭಾಗದ ಚರ್ಮ ಬೆಳವಣಿಗೆಯಾಗಿರದ ಕಾರಣ ಕರುಳು, ಕಿಡ್ನಿ ಹೊರಗೆ ಬಂದಿತ್ತು. ವಿವಿಧ ಅಂಗಾಂಗಗಳಿಗೂ ನಂಜು ಆವರಿಸಿತ್ತು. ಮಕ್ಕಳ ವಿಭಾಗದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ತಡರಾತ್ರಿ ಮೃತಪಟ್ಟಿದೆ’ ಎಂದು ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ ಹಸಬಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.