ADVERTISEMENT

ಒಳಮೀಸಲಾತಿ | ಶೇ 1ರಷ್ಟು ನೀಡಲು ಒತ್ತಾಯ: ಅಲೆಮಾರಿ ಬುಡಕಟ್ಟು ಮಹಾಸಭಾ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:55 IST
Last Updated 30 ಆಗಸ್ಟ್ 2025, 6:55 IST
ಒಳಮೀಸಲಾತಿಯಲ್ಲಿ ಶೇ. 1ರಷ್ಟು ಪಾಲು ನೀಡಬೇಕು ಎಂದು ಆಗ್ರಹಿಸಿ ಕೊಪ್ಪಳದಲ್ಲಿ ಶುಕ್ರವಾರ ರಾಜ್ಯ ಎಸ್‌ಸಿ ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಜನ
ಒಳಮೀಸಲಾತಿಯಲ್ಲಿ ಶೇ. 1ರಷ್ಟು ಪಾಲು ನೀಡಬೇಕು ಎಂದು ಆಗ್ರಹಿಸಿ ಕೊಪ್ಪಳದಲ್ಲಿ ಶುಕ್ರವಾರ ರಾಜ್ಯ ಎಸ್‌ಸಿ ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಜನ   

ಕೊಪ್ಪಳ: ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿ ಸಮುದಾಯಗಳಿಗೆ ಶೇ. 1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ರಾಜ್ಯ ಎಸ್‌ಸಿ ಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಸಮುದಾಯದ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಮತ್ತು ವೃತ್ತಿಯಾಗಿ ಮುಂದುವರಿಸಿಕೊಂಡು ಬಂದಿರುವ ಕಲಾವಿದರು ವೇಷಭೂಷಣ ತೊಟ್ಟು ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದ ತನಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ಏಕಸದಸ್ಯ ಆಯೋಗ ನೀಡಿದ ವರದಿ ಆಧರಿಸಿ ಆ.19ರಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ 49 ಅಲೆಮಾರಿ ಸಮುದಾಯಗಳನ್ನು ಮೂಲೆಗುಂಪು ಮಾಡುವ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಒಳಮೀಸಲಾತಿ ಜಾರಿ ಮಾಡುವ ಒತ್ತಡದಲ್ಲಿದ್ದ ಸರ್ಕಾರ ಎಲ್ಲ 101 ಪರಿಶಿಷ್ಟ ಜಾತಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವಲ್ಲಿ ಎಚ್ಚರಿಕೆ ವಹಿಸಬೇಕಿತ್ತು ಎಂದು ಸಮುದಾಯದ ಮುಖಂಡರು ಹೇಳಿದರು.

ADVERTISEMENT

ಒಳಮೀಸಲಾತಿ ಜಾರಿ ಮಾಡುವುದಾಗಿ ಸರ್ಕಾರ ಹೇಳಿದಾಗ ಸಾಕಷ್ಟು ಖುಷಿಪಟ್ಟಿದ್ದೆವು. ನಮಗೂ ದೊಡ್ಡ ಪಾಲು ಸಿಗುತ್ತದೆ ಎನ್ನುವ ನಿರೀಕ್ಷೆ ಹೊಂದಿದ್ದೆವು. ಅದರೆ ಕನಿಷ್ಠ ಪಾಲು ಕೂಡ ಸಿಕ್ಕಿಲ್ಲ. ಸರ್ಕಾರ ನಮಗೆ ಯಾವುದೇ ಭಿಕ್ಷೆ ಕೊಡುತ್ತಿಲ್ಲ. ನಮ್ಮ ಪಾಲಿನ ಹಕ್ಕು ನೀಡುತ್ತಿದ್ದು, ಅದನ್ನು ಕೊಡಲೇಬೇಕು ಎಂದು ಒತ್ತಾಯಿಸಿದರು.   

ಮಹಾಸಭಾದ ಗೌರವಾಧ್ಯಕ್ಷ ಸಣ್ಣಶಿವಪ್ಪ ಒಂಟೆತ್ತಿನವರ, ಜಿಲ್ಲಾ ಕಾರ್ಯಾಧ್ಯಕ್ಷ ಯಲ್ಲಪ್ಪ, ಉಪಾಧ್ಯಕ್ಷರಾದ ಬಸವರಾಜ ವಿಭೂತಿ, ಪರಸಪ್ಪ, ಕೆ.ಎಚ್‌. ವೆಂಕಟೇಶ್, ಖಜಾಂಚಿ ವೆಂಕಟೇಶ್, ಮುಖಂಡರಾದ ಪ್ರಕಾಶ್, ಕಾಸೀಂ ಕುಷ್ಟಗಿ, ವೆಂಕಟೇಶ್ ಚೆನ್ನದಾಸರ, ದೇವಿಕಾ ವಿಠ್ಠಲದಾಸ, ಮಲ್ಲಿಕಾರ್ಜುನ ಪೂಜಾರ, ಪ್ರಗತಿಪರ ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಶಿವಪ್ಪ ಹಡಪದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್‌, ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಗಣೇಶ್‌ ಹೊರತಟ್ನಾಳ ಬೆಂಬಲ ನೀಡಿದರು.   

ಶೇ. 1ರಷ್ಟು ಒಳಮೀಸಲಾತಿ ನಮ್ಮ ಹಕ್ಕು ನಮ್ಮ ಪಾಲಿನ ಹಕ್ಕು ಕೊಡಿ. ನಾವು ಭಿಕ್ಷೆ ಬೇಡುತ್ತಿಲ್ಲ. ಬೇಡಿಕೆ ಈಡೇರಿಸದೇ ಹೋದರೆ ಮುಂಗರುವ ಎಲ್ಲ ಚುನಾವಣೆಗಳನ್ನೂ ಬಹಿಷ್ಕರಿಸುತ್ತೇವೆ.
– ಸಂಜಯದಾಸ್ ಕೌಜಗೇರಿ, ಅಲೆಮಾರಿ ಸಮಿತಿಯ ಜಿಲ್ಲಾಧ್ಯಕ್ಷ

ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಯತ್ನ

ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಭವನದ ಪ್ರವೇಶದ್ವಾರಕ್ಕೆ ಬಂದ ಹೋರಾಟಗಾರರಿಂದ ಮನವಿ ಸ್ವೀಕರಿಸಲು ಮೊದಲು ಉಪವಿಭಾಗಾಧಿಕಾರಿ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಬಂದರು. ಇದಕ್ಕೆ ಸಮಾಧಾನಗೊಳ್ಳದ ಅಲೆಮಾರಿ ಸಮುದಾಯದ ಜನ ಜಿಲ್ಲಾಡಳಿತ ಭವನದ ಆವರಣ ನುಗ್ಗಲು ಯತ್ನಿಸಿದರು.

ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಜಟಾಪಟಿ ನಡೆಯಿತು. ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು. ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಪೊಲೀಸರು ಹೋರಾಟಗಾರರ ಆಕ್ರೋಶ ತಣಿಸಲು ಸಾಕಷ್ಟು ಪರದಾಡಬೇಕಾಯಿತು. ಕೆಲ ಹೊತ್ತಿನಲ್ಲಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ಅಂತ್ಯ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.