
ಕೊಪ್ಪಳ: ‘ಬಳ್ಳಾರಿಯಲ್ಲಿ ಗುಂಡಿನ ದಾಳಿ ಕೃತ್ಯದ ಬಳಿಕ ನನ್ನ ಜೀವಕ್ಕೆ ಅಪಾಯ ಎದುರಾಗಿದ್ದು, ತುರ್ತಾಗಿ ಝಡ್ ಶ್ರೇಣಿ ಭದ್ರತೆ ಒದಗಿಸಬೇಕು’ ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಒತ್ತಾಯಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಅವರು ಈ ಕುರಿತು ಪತ್ರ ಬರೆದಿದ್ದಾರೆ.
‘ನನಗೆ, ನನ್ನ ಕುಟುಂಬಕ್ಕೆ ಝಡ್ ಶ್ರೇಣಿ ಅಥವಾ ಅದಕ್ಕೆ ಸಮಾನವಾದ ಭದ್ರತೆ ಒದಗಿಸಬೇಕು. ರಾಜ್ಯ ಸರ್ಕಾರ ನಿರ್ಲಕ್ಷ್ಯವಹಿಸಿ, ಮತ್ತೆ ನನ್ನ ಮೇಲೆ ದಾಳಿ ನಡೆದರೆ ಅದಕ್ಕೆ ಸರ್ಕಾರವೇ ಹೊಣೆ’ ಎಂದೂ ಎಚ್ಚರಿಸಿದ್ದಾರೆ.
‘ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಆತನ ಗೂಂಡಾ ಸಹಚರರು ಪೆಟ್ರೋಲ್ ಬಾಂಬ್, ಬಂದೂಕು ಬಳಸಿ ನನ್ನ ಹತ್ಯೆಗೆ ಯತ್ನಿಸಿದ್ದಾರೆ. ಕಾನೂನು ಸುವ್ಯವಸ್ಥೆ ರಕ್ಷಿಸಲು ಸರ್ಕಾರ ವಿಫಲವಾಗಿದೆ. ಅತ್ಯಂತ ಆಕ್ರೋಶ ಹಾಗೂ ಆಘಾತದೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.
‘ಬಳ್ಳಾರಿಯ ನನ್ನ ನಿವಾಸದ ಬಳಿ ನಡೆದ ಭೀಕರ ದಾಳಿ ಸಾಮಾನ್ಯವಾದ ರಾಜಕೀಯ ಘರ್ಷಣೆಯಲ್ಲ. ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ಭರತ್ ರೆಡ್ಡಿ ನಡೆಸಿದ ಪೂರ್ವನಿಯೋಜಿತ ಸಂಚು. ಪೊಲೀಸರ ಎದುರೇ ದಾಂಧಲೆ ನಡೆಸಿ ಶಾಸಕನ ಹತ್ಯೆ ಯತ್ನವು ರಾಜ್ಯದಲ್ಲಿ ‘ಜಂಗಲ್ ರಾಜ್’ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.