ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು
ಗಂಗಾವತಿ (ಕೊಪ್ಪಳ ಜಿಲ್ಲೆ): ಸಂಡೂರು ಉಪಚುನಾವಣೆಯ ಫಲಿತಾಂಶದ ಬಳಿಕ ಪರಸ್ಪರ ಟೀಕೆ, ಪ್ರತಿಟೀಕೆಗಳಲ್ಲಿ ತೊಡಗಿ ಮುನಿಸಿಕೊಂಡಿದ್ದ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ತಾಲ್ಲೂಕಿನ ಮರಳಿ ಗ್ರಾಮದ ಸಮೀಪದಲ್ಲಿ ಭಾನುವಾರ ನಡೆದ ಪಕ್ಷದ ಅವಲೋಕನಾ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ‘ನಾವಿಬ್ಬರೂ ಒಂದೇ’ ಎನ್ನುವ ಸಂದೇಶ ಸಾರಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 11 ವರ್ಷಗಳಾಗಿದ್ದರಿಂದ ಅವರ ಸಾಧನೆ ತಿಳಿಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತು. ವಿಜಯೇಂದ್ರ ಅವರಿಬ್ಬರ ಕೈಗಳನ್ನೂ ಎತ್ತಿ ಹಿಡಿದು ಮುನಿಸು ಮರೆಯುವಂತೆ ಮಾಡಿದರು. ಕಾರ್ಯಕ್ರಮದಲ್ಲಿ ರೆಡ್ಡಿ ಮತ್ತು ಶ್ರೀರಾಮುಲು ಅಕ್ಕಪಕ್ಕದಲ್ಲಿಯೇ ಕುಳಿತರು.
ಜನಾರ್ದನ ರೆಡ್ಡಿ ಮಾತನಾಡಿ ‘ನಮ್ಮ ನಡುವೆ ಮಧ್ಯಸ್ಥಿಕೆ ಮಾಡಲು ಯಾರಾದರೂ ಮುಂದಾದರೆ ಅವರಂಥ ಮೂರ್ಖರು ಯಾರೂ ಇಲ್ಲ. ನಮಗೆ ಸಂಧಾನದ ಅಗತ್ಯವಿಲ್ಲ. ನಮ್ಮದು ಸ್ನೇಹದ ಜಗಳ. ಇದರ ಲಾಭ ಪಡೆಯಲು ಪ್ರಯತ್ನಿಸಿದವರಿಗೆ ಏನೂ ಸಿಗುವುದಿಲ್ಲ’ ಎಂದರು.
ಶ್ರೀರಾಮುಲು ಮಾತನಾಡಿ ‘ಪಕ್ಷದ ವಿಚಾರ ಬಂದಾಗ ನಾವು ಮಾದರಿಯಾಗಬೇಕು. ಕಾಂಗ್ರೆಸ್ಸಿಗರ ರೀತಿಯಲ್ಲಿ ಹರಕೆಯ ಕುರಿ ಆಗಬಾರದು. ಪಕ್ಷ ಸಂಘಟನೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಜನಾರ್ದನ ರೆಡ್ಡಿ ಜೊತೆ ಯಾವುದೇ ಮುನಿಸು ಇಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.