ADVERTISEMENT

‘ಉದ್ಯೋಗ ಮೇಳ ಆಯೋಜನೆಗೆ ನಿರ್ಧಾರ’

ವಿವಿಧ ಕಂಪನಿಗಳಲ್ಲಿ ಉದ್ಯೋಗದ ಮಾಹಿತಿ, ನೇಮಕ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 9:42 IST
Last Updated 29 ಜನವರಿ 2020, 9:42 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಉದ್ಯೋಗ ಮೇಳ ಆಯೋಜನೆ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿದರು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಉದ್ಯೋಗ ಮೇಳ ಆಯೋಜನೆ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿದರು   

ಕೊಪ್ಪಳ:ಪ್ರಸ್ತುತ ಸಾಲಿನ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಫೆಬ್ರುವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ವರ್ಷ ಉದ್ಯೋಗಾಕಾಂಕ್ಷಿಗಳಿಗೆ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಮೇಳವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಹಾಗೂ ಡಿ.ಎಂ.ಎಫ್ ಅನುದಾನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಭಾವಿ ತರಬೇತಿ ನೀಡುವ ಕುರಿತು ಮಂಗಳವಾರನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದಸಾಲಿನ ಉದ್ಯೋಗ ಮೇಳದಲ್ಲಿ ಒಟ್ಟು 4,945 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 1,336 ಅಭ್ಯರ್ಥಿಗಳು ವಿವಿಧ ಕಂಪನಿಕೆಲಸಕ್ಕೆ ಆಯ್ಕೆಯಾಗಿದ್ದಾರೆ. ಈ ಮೇಳದಲ್ಲಿ 92 ಕಂಪನಿಗಳು ಭಾಗವಹಿಸಿದ್ದವು. ಅವುಗಳಲ್ಲಿ ಬಹುತೇಕ ಬೆಂಗಳೂರಿನ ಮೂಲದ ಕಂಪನಿಗಳಾಗಿದ್ದವು. ಈ ಕಾರಣದಿಂದಾಗಿ ಮತ್ತು ಇತರೆ ವೈಯಕ್ತಿಕ ಕಾರಣಗಳಿಂದಾಗಿ ಶೇ 50 ರಷ್ಟು ಅಭ್ಯರ್ಥಿಗಳು ಮಾತ್ರ ಕೆಲಸ ಪಡೆದಿದ್ದಾರೆ ಎಂದು ತಿಳಿದುಬಂದಿದೆ ಎಂದರು.

ADVERTISEMENT

ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಈ ಬಾರಿ ಅಭ್ಯರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕೊಡಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗವನ್ನು ಕೊಡಬಹುದಾದ ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಧಾರವಾಡ ಹಾಗೂ ಸ್ಥಳೀಯ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಏಜೆನ್ಸಿ (ಪ್ಲೇಸ್‌ಮೆಂಟ್ ಏಜೆನ್ಸಿ)ಗಳನ್ನು ಆಹ್ವಾನಿಸಿ ಉದ್ಯೋಗ ಮೇಳ ಯಶಸ್ವಿಗೊಳಿಸಬೇಕು. ಈ ಉದ್ಯೋಗ ಮೇಳಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರಿ ನಿಯಮಾನುಸಾರ ಎಂ.ಸಿ.ಎಗೆ ಕೊಡಲು ತೀರ್ಮಾನಿಸಲಾಗಿದೆ ಎಂದರು.

ಜಿಲ್ಲಾ ಖನಿಜ ನಿಧಿ (ಡಿ.ಎಂ.ಎಫ್) ಅಡಿಯಲ್ಲಿ ಶಾಸಕರ ಅಭಿಪ್ರಾಯವನ್ನು ಪಡೆದು ಕೊಪ್ಪಳ ಜಿಲ್ಲೆಯ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಅರ್ಹ, ನುರಿತ, ಹೆಸರಾಂತ ತರಬೇತಿ ಸಂಸ್ಥೆಗಳಿಂದ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಬ್ಯಾಂಕಿಂಗ್, ಸೇನಾ ನೇಮಕಾತಿ, ಪೊಲೀಸ್, ಪಿಡಿಒ ಇತ್ಯಾದಿ ಪರೀಕ್ಷೆಗಳಿಗೆ ವಿಜ್ಞಾನ ಭವನದಲ್ಲಿ ಸಕಲ ಸೌಕರ್ಯಗಳೊಂದಿಗೆ ತರಬೇತಿ ನೀಡಲಾಗುವುದು ಎಂದರು.

ಹೆಚ್ಚುವರಿಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿಲ್ಲಾ ಯೋಜನಾ ನಿರ್ದೇಶಕ ಸಿದ್ಧರಾಮೇಶ್ವರ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಗವಿಶಂಕರ್ ಕೆ., ಜಿಲ್ಲಾ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ, ಜಿಲ್ಲಾ ಮಾಹಿತಿ ಅಧಿಕಾರಿ ಈರಣ್ಣ, ಪೌರಾಯುಕ್ತರಾದ ಮಂಜುನಾಥ ಟಿ.ಎ, ಕ್ರೀಡಾ ಇಲಾಖೆ ಅಧಿಕಾರಿ ಆರ್.ಜಿ. ನಾಡಗೀರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಎನ್.ಜಿ. ಕನಕರೆಡ್ಡಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಶಿಧರ ಪಾಟೀಲ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಿಸರಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.