ಕುಷ್ಟಗಿಯಲ್ಲಿ ಮಂಗಳವಾರ ವೆಲ್ಫೇರ್ ಪಕ್ಷ ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಜನ ಜಾಗೃತಿ ಜಾಥಾದಲ್ಲಿ ಪ್ರಮುಖರು ಭಾಗವಹಿಸಿದ್ದರು.
ಕುಷ್ಟಗಿ: ಕಲ್ಯಾಣ ಕರ್ನಾಟಕ ಪ್ರದೇಶದ ನ್ಯಾಯಪೂರ್ಣ ಅಭಿವೃದ್ಧಿ ಹಾಗೂ ಈ ಭಾಗಕ್ಕೆ ಅಗತ್ಯವಾಗಿರುವ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ವೆಲ್ಫೇರ್ ಪಕ್ಷದ ರಾಜ್ಯ ಘಟಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಜಾಗೃತಿ ಜಾಥಾ ನಡೆಸುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಪಟ್ಟಣದಲ್ಲಿ ಜಾಥಾವನ್ನು ಬರಮಾಡಿಕೊಳ್ಳಲಾಯಿತು. ಬಳ್ಳಾರಿಯಿಂದ ಆರಂಭಗೊಂಡಿರುವ ಜಾಥಾ ಬೀದರ್ ನಂತರ ಕಲಬುರಗಿಗೆ ತೆರಳಲಿದ್ದು ಸರ್ಕಾರಕ್ಕೆ ಪ್ರಮುಖ ಬೇಡಿಕೆಗಳ ಕುರಿತು ಗಮನ ಸೆಳೆಯಲಾಗುತ್ತದೆ ಎಂದು ತಿಳಿಸಲಾಗಿದೆ.
ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪ್ರಮುಖರು, ‘ಹೆಸರು ಕಲ್ಯಾಣ ಕರ್ನಾಟಕವಾಯಿತಾದರೂ ದಶಕವಾದರೂ ಈ ಭಾಗಕ್ಕೆ ನಿಜವಾದ ಅರ್ಥದಲ್ಲಿ ಕಲ್ಯಾಣ ದೊರೆತಿಲ್ಲ. ಅನೇಕ ಜ್ವಲಂತ ಸಮಸ್ಯೆಗಳು ಮುಂದುವರಿದಿವೆ. ಕಾರ್ಮಿಕರು ಗುಳೆ ಹೋಗುವುದು ತಪ್ಪಿಲ್ಲ, ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ. ಮಕ್ಕಳ ಅಪೌಷ್ಟಿಕತೆ ಸಮಸ್ಯೆ ಮುಂದುವರಿದಿದೆ. ರೈತರ ಸಂಕಷ್ಟಗಳಿಗೆ ಪರಿಹಾರ ದೊರೆತಿಲ್ಲ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತ ಸಮುದಾಯಗಳಿಗೆ ನಿರೀಕ್ಷಿತ ರೀತಿಯಲ್ಲಿ ಸಾಮಾಜಿಕ ನ್ಯಾಯ ದೊರಕಿಲ್ಲ. ಸರ್ಕಾರ ಬಿಡುಗಡೆ ಮಾಡಿದ ಸಾವಿರಾರು ಕೋಟಿ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ವಕೀಲ ತಾಹಿರ್ ಹುಸೇನ್, ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ, ಜಿಲ್ಲಾ ಅಧ್ಯಕ್ಷ ಆದಿಲ್ ಪಟೇಲ್, ಬಸವರಾಜ ಗಾಣಿಗೇರ, ಮೆಹಬೂಬಸಾಬ್ ಹುರಕಡ್ಲಿ, ಮಂಜುನಾಥ್ ಹಕ್ಕಲ್, ಇರ್ಫಾನ್ ಹಾಲಿಗಾಡಿ, ಅನ್ಸಾರ್, ಆಫ್ತಾಬ್, ರಮೇಶ್ ನಾಯಕ, ಗುರುಪ್ರಸಾದ ಕೊನಸಾಗರ ಸೇರಿದಂತೆ ಇತರೆ ಪ್ರಮುಖರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.