ADVERTISEMENT

ಸರಳ ಕನಕಾಚಲಪತಿ ರಥೋತ್ಸವ

ಬೇರೆ ಊರಿನ ಭಕ್ತರಿಗೆ ಪ್ರವೇಶ ನಿಷೇಧ: ಸ್ಥಳೀಯ ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 16:53 IST
Last Updated 4 ಏಪ್ರಿಲ್ 2021, 16:53 IST
ಕನಕಗಿರಿಯ‌ಲ್ಲಿ ಭಾನುವಾರ ಬೆಳಿಗ್ಗೆ ಕನಕಾಚಲಪತಿ ರಥೋತ್ಸವ ನಡೆಯಿತು
ಕನಕಗಿರಿಯ‌ಲ್ಲಿ ಭಾನುವಾರ ಬೆಳಿಗ್ಗೆ ಕನಕಾಚಲಪತಿ ರಥೋತ್ಸವ ನಡೆಯಿತು   

ಕನಕಗಿರಿ: ಇಲ್ಲಿನ ಕನಕಾಚಲಪತಿ ದೇವರ ರಥೋತ್ಸವ ಭಾನುವಾರ ಬೆಳಿಗ್ಗೆ ಸಂಭ್ರಮದಿಂದ ನಡೆಯಿತು.

ರಥೋತ್ಸವ ಸಂಜೆ ನಡೆಯಬೇಕಾಗಿತ್ತು. ಕೋವಿಡ್-19 ಕಾರಣಕ್ಕೆ ಬೆಳಿಗ್ಗೆ ನಡೆಯಿತು.

ರಥೋತ್ಸವದ ಪ್ರಯುಕ್ತ ನಸುಕಿನ ಜಾವ ಕನಕಾಚಲಪತಿ ದೇವಸ್ಥಾನದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ರಥದ ಮುಂಭಾಗದಲ್ಲಿ ರಥಾಂಗ ಹೋಮ, ಹವನ, ಪೂರ್ಣಾಹುತಿ, ಅನ್ನ ಬಲಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ADVERTISEMENT

ತಳಿರು–ತೋರಣ, ಗೊಂಬೆ, ಹೂವು, ಬಾವುಟ, ಐದು ಪ್ರಕಾರದ ಚಟ್ಟಗಳನ್ನು ಕಟ್ಟಿ ರಥವನ್ನು ಶೃಂಗರಿಸಲಾಗಿತ್ತು. ರಾಜಬೀದಿಯಲ್ಲಿ ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಬಾಳೆ ಹಣ್ಣು, ಉತ್ತತ್ತಿ, ಹೂ ಎಸೆದು ಧನ್ಯತೆ ಮೆರೆದರು.

ರಥದ ಗಾಲಿಗೆ ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು.

ಕೊರೊನಾ ಕಾರಣ ಬೇರೆ ಊರಿನ ಭಕ್ತರು ಬಾರದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿತ್ತು. ಪ್ರತಿ ವರ್ಷದಂತೆ ಈ ಸಲದ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿರಲಿಲ್ಲ.

ಮನೆ, ಮಾಳಿಗೆ ಮೇಲೆ ಅಷ್ಟೊಂದು ಪ್ರಮಾಣದಲ್ಲಿ ಜನರು ಕಾಣಿಸಲಿಲ್ಲ. ರಾಜಬೀದಿಯಲ್ಲಿ ನಿಂತ ಭಕ್ತರು ರಥೋತ್ಸವ ವೀಕ್ಷಿಸಿದರು. ಬಾಜಾ–ಭಜಂತ್ರಿ, ತಾಷ, ವಾದ್ಯ–ಮೇಳ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದವು.

ತೇರು ಹನುಮಪ್ಪನ ದೇವಸ್ಥಾನ ತಲುಪಿ ಮತ್ತೆ ಪಾದಗಟ್ಟೆ ವರೆಗೆ ಸಾಗಿತು. ಈ ವೇಳೆ ಭಕ್ತರ ಸಂಭ್ರಮಕ್ಕೆ ಪಾರವೆ ಇರಲಿಲ್ಲ.

ಅಂಗಡಿ ಮಾಲೀಕರಿಗೆ ನಷ್ಟ: ಅಧಿಕಾರಿಗಳು ರಾಜಬೀದಿಯಲ್ಲಿ ಖಾದ್ಯ ಪದಾರ್ಥ, ಆಟಿಕೆ, ಬಳೆ ಸೇರಿದಂತೆ ಅಂಗಡಿ ಮುಂಗಟ್ಟು ಹಾಕಲು ಅವಕಾಶ ನೀಡಲಿಲ್ಲ.

ಹೀಗಾಗಿ ರಥ ಎಳೆದಾಗ ರಾಜಬೀದಿಯಲ್ಲಿ ಹೆಚ್ಚಿನ ಸಂಖ್ಯೆಯ ಜನ ಕಾಣಸಿಗಲಿಲ್ಲ. ಕಾಯಿ, ಕರ್ಪೂರ, ತೆಂಗಿನಕಾಯಿ, ಹೂವು, ಕುಂಕುಮ, ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಉಪ ವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಪೊಲೀಸ್ ಉಪವಿಭಾಗಾಧಿಕಾರಿ ರುದ್ರೇಶ ಆರ್. ಉಜ್ಜಿನಕೊಪ್ಪ, ತಹಶೀಲ್ದಾರ್ ರವಿ ಅಂಗಡಿ, ದೇವಸ್ಥಾನ ಆಡಳಿತಾಧಿಕಾರಿ ಅರವಿಂದ ಸುತಗುಂಡಿ ನೇತೃತ್ವ ವಹಿಸಿಕೊಂಡು ಜಾತ್ರಾ ಮಹೋತ್ಸವವನ್ನು ಸರಳವಾಗಿ ನಡೆಯುವಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.