ADVERTISEMENT

ಕನಕಗಿರಿಯ ಕನಕಾಚಲಪತಿ ಜಾತ್ರೆಗೆ ಆರಂಭದಿಂದ ಕೊನೆ ವರೆಗೆ ನೆರವಾಗುವ ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 11:25 IST
Last Updated 24 ಮಾರ್ಚ್ 2022, 11:25 IST
  ಗರುಡೋತ್ಸವದ ಕಾರ್ಯಕ್ರಮದಲ್ಲಿ ತಾಷ ಬಡಿಯುತ್ತಿರುವ ತಾಷವಾಲೆ ಸಹೋದರರು
  ಗರುಡೋತ್ಸವದ ಕಾರ್ಯಕ್ರಮದಲ್ಲಿ ತಾಷ ಬಡಿಯುತ್ತಿರುವ ತಾಷವಾಲೆ ಸಹೋದರರು   

ಕನಕಗಿರಿ: ಇಲ್ಲಿನ ಕನಕಾಚಲಪತಿ ಜಾತ್ರಾ ಮಹೋತ್ಸವ ಭಾವೈಕ್ಯತೆಯ ಸಂಕೇತವಾಗಿದೆ. ಜಾತ್ರಾ ಮಹೋತ್ಸವದ ಕಾರ್ಯಕ್ರಮ ಆರಂಭದಿಂದ ಹಿಡಿದು ಕೊನೆಯ ತನಕವೂ ಮುಸ್ಲಿಮರು ಭಾಗವಹಿಸುತ್ತಾರೆ.

ದೇವಸ್ಥಾನದ ಗೋಡೆ, ಗೋಪುರಗಳಿಗೆ ಸುಣ್ಣ ಬಣ್ಣ ಹಚ್ಚುವುದು, ತೇರು ಎಳೆಯಲು ಹಾಗೂ ಉಚ್ಚಾಯದ ಕೆಲಸಗಳಿಗೆ ಬೇಕಾಗುವ ಮಿಣಿ (ಹಗ್ಗ) ತಯಾರಿಸುವುದು, ಉಚ್ಚಾಯ ಹೆಗಲ ಮೇಲೆ ಹೊತ್ತುಕೊಳ್ಳುವುದು, ತೇರು ಎಳೆಯುವುದು ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಮುಸ್ಲಿಮರು ಸಕ್ರಿಯವಾಗಿ ಭಾಗವಹಿಸುತ್ತಾರೆ.

ದಿ. ಹೊನ್ನುರುಸಾಬ ಗೊರಳ್ಳಿ ಎಂಬುವವರು ಮೂರು ದಶಕಕ್ಕಿಂತ ಹೆಚ್ಚು ವರ್ಷಗಳ ಕಾಲ ದೇಗುಲದ ಕೆಲಸದಲ್ಲಿ ಭಾಗಿಯಾಗಿದ್ದರು. ಗೊರಳ್ಳಿ ಅವರ ಪುತ್ರರಾದ ಹಟೇಲಸಾಬ, ನಜೀರಸಾಬ ಗೊರಳ್ಳಿ ಅವರು ಸಹ ತೇರಿನ ಕೆಲಸದಲ್ಲಿ ನಿಪುಣರಾಗಿದ್ದರು. ವಯೊಸಹಜ ಕಾಯಿಲೆಯಿಂದಾಗಿ ಕೆಲಸಕ್ಕೆ ಹೋಗುತ್ತಿಲ್ಲ.

ADVERTISEMENT

ರಂಜಾನಸಾಬ, ಹಸೇನಸಾಬ ಇಟಗಿ (ಹಗಲಿ) ಅವರು ಈಗಲೂ ದೇವರ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.ಅಂಗವಿಕಲರಾಗಿರುವ ಹುಸೇನಸಾಬ ಅವರು ಈಗಲೂ ಪರಿಚಾರಕನಾಗಿ ಕೆಲಸ ಮಾಡುತ್ತಿರುವದು ಕಂಡು ಬಂದಿದೆ.

ತೇರಿನ ಗಾಲಿಗೆ ಬೇಕಾದ ಸೂಕ್ತ ಕಟ್ಟಿಗೆ ತುಂಡುಗಳನ್ನು ತರಲು ಗೊರಳ್ಳಿ ಅವರನ್ನು ಕರೆದುಕೊಂಡು ಹೋಗಲಾತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಜಾತ್ರಾ ಮಹೋತ್ಸವದ ದಿನಗಳಲ್ಲಿ ದೇಗುಲದಲ್ಲಿ ಕೆಲಸ ಮಾಡುವ ಮುಸ್ಲಿಂ ಕುಟುಂಬದವರು ಮಾಂಸ, ಮದ್ಯದಿಂದ ದೂರವಿರುತ್ತಾರೆ. ಮನೆಯಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಾರೆ.

’ಕನಕರಾಯನ ಜಾತ್ರೆ ಎಲ್ಲಾ ಜಾತಿ, ಧರ್ಮಗಳ ಸಂಗಮವಾಗಿದೆ. ಇಲ್ಲಿ ಧರ್ಮ, ಜಾತಿಯ ಸೋಂಕು ಇಲ್ಲ. ಅನೇಕ ಜನ ಮುಸ್ಲಿಮರು ದೇಗುಲದಲ್ಲಿ ಕೆಲಸ ಮಾಡಿದ್ದಾರೆ. ಇವರ ಸೇವೆ ಬರೀ ಜಾತ್ರೆಗಷ್ಟೇ ಸೀಮಿತವಾಗಿಲ್ಲ. ಯುಗಾದಿ, ದಸರಾ ಹಬ್ಬದಲ್ಲಿ ನಡೆಯುವ ಉಚ್ಚಾಯಗಳನ್ನು ಮುಸ್ಲಿಮರು ಹೊತ್ತುಕೊಳ್ಳುತ್ತಾರೆ‘ ಎಂದು ಹಿರಿಯ ಕಲಾವಿದ ನರಸಿಂಹ ಚಿತ್ರಗಾರ ಹೇಳುತ್ತಾರೆ.

ಇಲ್ಲಿನ ತಾಷಬಡಿ (ತಾಷವಾಲೆ) ಕುಟುಂಬದವರು ಅನೇಕ ವರ್ಷಗಳಿಂದಲೂ ಗರುಡೋತ್ಸವ ಕಾರ್ಯಕ್ರಮದಲ್ಲಿ ತಾಷ ಬಡಿಯುತ್ತಾ ಬಂದಿದ್ದಾರೆ. ಚಂದುಸಾಬ ಅವರ ನಂತರ ಅವರ ಮಕ್ಕಳಾದ ರಾಜವಲಿ, ಹಟೇಲಸಾಬ ಹಾಗೂ ನಬೀಸಾಬ ತಾಷಬಡಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

’ನಮಗೆ ಎಲ್ಲಾ ದೇವರುಗಳು ಒಂದೇ.ಇಷ್ಟಾರ್ಥಗಳ ಈಡೇರಿಕೆಗೆ ಎಲ್ಲಾ ದೇವರುಗಳಿಗೆ ಹರಕೆ ಹೊತ್ತುಕೊಳ್ಳುತ್ತೇವೆ. ಕನಕರಾಯ ದೇವರು ನಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಿದ್ದಾರೆ‘ ಎಂದು ರಂಜಾನಸಾಬ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.