ADVERTISEMENT

ಕನಕಗಿರಿ | ‘ಮನೆ ಮನೆಗೆ ಪೊಲೀಸ್’: ಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:51 IST
Last Updated 22 ಜುಲೈ 2025, 4:51 IST
ಕನಕಗಿರಿ ಸಮೀಪದ ಗುಡದೂರು ಗ್ರಾಮಕ್ಕೆ ಕಾನ್‌ಸ್ಟೆಬಲ್ ಷರೀಫ್ ಸೋಮವಾರ ಭೇಟಿ‌ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು
ಕನಕಗಿರಿ ಸಮೀಪದ ಗುಡದೂರು ಗ್ರಾಮಕ್ಕೆ ಕಾನ್‌ಸ್ಟೆಬಲ್ ಷರೀಫ್ ಸೋಮವಾರ ಭೇಟಿ‌ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು   

ಕನಕಗಿರಿ: ‘ಪೊಲೀಸ್ ಹಾಗೂ ಸಮುದಾಯದ ನಡುವೆ ವಿಶ್ವಾಸ ಮೂಡಿಸಲು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸಹಕಾರಿಯಾಗಿದೆ’ ಎಂದು ಪಿಐ ಎಂ.ಡಿ.‌ಫೈಜುಲ್ಲಾ ತಿಳಿಸಿದರು.

ಸಮೀಪದ ಗುಡದೂರು ಗ್ರಾಮದಲ್ಲಿ ನಡೆದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಕ್ಕೆ ಚಾಲನೆ‌ ನೀಡಿ ಅವರು ಮಾತನಾಡಿದರು.

‘ಠಾಣೆ ವ್ಯಾಪ್ತಿಯ ಪ್ರತಿ ಗ್ರಾಮದ ಮನೆಗಳಿಗೆ ಪೊಲೀಸರು ಭೇಟಿ‌ ನೀಡಿ ಸಾರ್ವಜನಿಕರ ಆಹವಾಲು ಸ್ವೀಕರಿಸಲಿದ್ದಾರೆ. ಗ್ರಾಮದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಕಡಿವಾಣ ಹಾಕಲು, ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಕಾರ್ಯಕ್ರಮ ಸಹಾಯಕವಾಗಿದೆ. ಗ್ರಾಮದಲ್ಲಿ ತಾವು ಎದುರಿಸುತ್ತಿರುವ‌ ರಸ್ತೆ ಡಾಂಬರೀಕರಣ, ಬಸ್ ಕೊರತೆ, ಶಿಕ್ಷಕರ ಕೊರತೆ, ಆಶ್ರಯ ಮನೆ, ನರೇಗಾ ಕೂಲಿ ಕೆಲಸ ಸೇರಿದಂತೆ ಇತರೆ ಸಾರ್ವಜನಿಕ ಸಮಸ್ಯೆಗಳನ್ನು ಪೊಲೀಸರ ಗಮನಕ್ಕೆ ತಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಗಮನಕ್ಕೆ ತಂದು ಬಗೆಹರಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಪೊಲೀಸರು ಎಂದರೆ ಭಯಪಡಬೇಡಿ ಅವರು ಸಹ ಮನುಷ್ಯರೇ. ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ’ ಎಂದರು.

ಮಾದಕ ದ್ರವ್ಯ, ಮದ್ಯ ಸೇವನೆಯಿಂದ ಯುವ ಜನತೆ ದೂರವಿದ್ದು ಪುಸ್ತಕ, ಪತ್ರಿಕೆ ಓದಿನ ಕಡೆಗೆ ಗಮನ ಹರಿಸಲು ಈ ಸಮಯದಲ್ಲಿ ಮಾರ್ಗದರ್ಶ‌ನ ನೀಡಲಾಗುವುದು ಎಂದು ತಿಳಿಸಿದರು.

ಕಾನ್‌ಸ್ಟೆಬಲ್ ಷರೀಫ್ ಮಾತನಾಡಿ, ‘ತಲಾ 50‌ಮನೆಗಳನ್ನು ಸೇರಿಸಿ ಗುಂಪು ರಚಿಸಲಾಗುತ್ತಿದೆ, ಗುಂಪಿನ ಸದಸ್ಯರು ತಮ್ಮ‌ ಸಮಸ್ಯೆಗಳನ್ನು ಪೊಲೀಸರ ಮುಂದೆ ಹೇಳಿಕೊಂಡರೆ ಬಗೆಹರಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.