ADVERTISEMENT

ಕನಕಗಿರಿ: ಎಂಟು ವರ್ಷಗಳ ಬಳಿಕ ಉಪನೋಂದಣಿ ಕಚೇರಿ

ಕೊನೆಗೂ ಕೂಡಿ ಬಂದ ಕಾಲ; ಇಂದು ಉದ್ಘಾಟನೆಯ ಭಾಗ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:17 IST
Last Updated 9 ಫೆಬ್ರುವರಿ 2026, 7:17 IST
ಶಿವರಾಜ ತಂಗಡಗಿ
ಶಿವರಾಜ ತಂಗಡಗಿ   

ಕನಕಗಿರಿ: ಕನಕಗಿರಿ ತಾಲ್ಲೂಕು ಕೇಂದ್ರವಾದ ಎಂಟು ವರ್ಷಗಳ ನಂತರ ಪಟ್ಟಣದಲ್ಲಿ ಉಪ ನೋಂದಣಿ ಅಧಿಕಾರಿಗಳ ಕಚೇರಿಯ ಉದ್ಘಾಟನೆ ಭಾಗ್ಯ ಕೂಡಿಬಂದಿದ್ದು, ಸೋಮವಾರ ಉದ್ಘಾಟನೆ ನೆರವೇರಲಿದೆ.

ನೂತನ ತಾಲ್ಲೂಕು ರಚನೆಯಾದಾಗ ಆಗ ಶಾಸಕರಾಗಿದ್ದ ಶಿವರಾಜ ತಂಗಡಗಿ 2018ರ ಜ. 30ರಂದು ತಹಶೀಲ್ದಾರ್ ಕಚೇರಿ ಆರಂಭಿಸುವ ಮೂಲಕ ಅಧಿಕೃತವಾಗಿ ತಾಲ್ಲೂಕು ಕೇಂದ್ರಕ್ಕೆ ಚಾಲನೆ ನೀಡಿದ್ದರು. ಬಳಿಕ ಬೇರೆ ಬೇರೆ ಕಚೇರಿಗಳು ಆರಂಭವಾಗಿದ್ದವು. 

ತಾಲ್ಲೂಕಿನ ಆದಾಯ ಹೆಚ್ಚಿಸುವ ಇಲಾಖೆಯಾದ ಉಪ ನೋಂದಣಿ ಅಧಿಕಾರಿಗಳ ಕಚೇರಿಯ ಸ್ಥಾಪನೆ ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು. ವರ್ಷದ ಹಿಂದೆ ಮಂಜೂರು ಮಾಡಿಸಿದ್ದ ತಂಗಡಗಿ ಕಚೇರಿ‌ ಎಲ್ಲಿ ಆರಂಭಿಸಬೇಕೆಂಬ ಗೊಂದಲದಲ್ಲಿದ್ದರು. ಕಚೇರಿಗೆ ಸ್ಥಾಪನೆಗೆ ತಹಶೀಲ್ದಾರ್ ಕಚೇರಿ ಪಕ್ಕದಲ್ಲಿರುವ ಯಾತ್ರಿ ನಿವಾಸದ ಕಟ್ಟಡ,‌ ಎಪಿಎಂಸಿ ಇತರೆ ಕಟ್ಟಡಗಳನ್ನು ಪರಿಶೀಲನೆ ಮಾಡಲಾಗಿತ್ತು.

ADVERTISEMENT

ಕೊನೆಗೆ ಇಲ್ಲಿನ ರುದ್ರಸ್ವಾಮಿ ವಿದ್ಯಾವರ್ಧಕ ಸಂಘದ ಪ್ರೌಢ ಹಾಗೂ ಕಾಲೇಜು ಕೊಠಡಿ ಸೂಕ್ತವಾಗಿದ್ದರಿಂದ ಅಂತಿಮವಾಗಿ‌ ಇಲ್ಲಿಯೆ ಕಚೇರಿ ತನ್ನ‌ ಕೆಲಸ ಆರಂಭಿಸಲಿದೆ. ಕಚೇರಿಗೆ ಬೇಕಾದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾಮಗ್ರಿ ಸೌಲಭ್ಯಗಳಿಗೆ ತಂಗಡಗಿ ಶಾಸಕರ ಪ್ರದೇಶಾಭಿವೃದ್ಧಿಯಲ್ಲಿ ₹5 ಲಕ್ಷ ರೂಪಾಯಿ ಅನುದಾನ‌ ಒದಗಿಸಿದ್ದಾರೆ. 

ಕಚೇರಿ ಸಿದ್ದಗೊಂಡು ಎರಡು ತಿಂಗಳಾಗಿದ್ದರೂ ಉದ್ಘಾಟನೆ‌ ಮಾಡಿರಲಿಲ್ಲ. ಇಷ್ಟು ದಿನ ಆಸ್ತಿಯ ನೋಂದಣಿಗಾಗಿ ಈ ಭಾಗದ‌ ಜನ ಗಂಗಾವತಿಗೆ ಅಲೆದಾಡಬೇಕಿತ್ತು. 

ಈ ಹಿಂದೆ ಶಾಸಕರಾಗಿದ್ದ ಬಸವರಾಜ ದಢೇಸೂಗೂರು ಅವರ ಅವಧಿಯಲ್ಲಿ ಪಟ್ಟಣದಲ್ಲಿ ಖಜನಾಧಿಕಾರಿಗಳ ಕಚೇರಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಗಳು ಆರಂಭವಾಗಿವೆ. ಈಗ ನ್ಯಾಯಾಲಯ, ಕೃಷಿ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ, ಕುಡಿಯುವ ನೀರು ಸರಬರಾಜ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,‌ ಜೆಸ್ಕಾಂ ಎಇಇ‌ ಸೇರಿದಂತೆ ಇತರೆ ಕಚೇರಿಗಳು ಆರಂಭವಾಗಬೇಕಿವೆ ಎಂದು ಪಟ್ಟಣ‌ ಪಂಚಾಯಿತಿ ಸದಸ್ಯರಾದ ಶೇಷಪ್ಪ ಪೂಜಾರ, ಹನುಮಂತಪ್ಪ ಬಸರಿಗಿಡದ ಅವರು ಆಗ್ರಹಿಸಿದ್ದಾರೆ.

ಕನಕಗಿರಿಯ ಬಸ್ ನಿಲ್ದಾಣ ಹಾಗೂ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ರುದ್ರಸ್ವಾಮಿ ಪ್ರೌಢಶಾಲೆಯ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿರುವ ಉಪ ನೋಂದಣಾಧಿಕಾರಿಗಳ ಕಚೇರಿ
ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಕನಕಗಿರಿ ಕಾರಟಗಿ ತಾಲ್ಲೂಕು ಕೇಂದ್ರಗಳಾಗಿವೆ. ಎರಡು ಕಡೆಯಲ್ಲಿಯೂ ಪ್ರಜಾಸೌಧ ಕಟ್ಟಡ ಆರಂಭಗೊಂಡಿದ್ದು‌ ತಾಲ್ಲೂಕಿಗೆ ಸಂಬಂಧಿಸಿದ ಎಲ್ಲಾ ಕಚೇರಿಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.
ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.