
ಕನಕಗಿರಿ: ಇಲ್ಲಿನ ಕನಕಾಚಲಪತಿ ದೇವಸ್ಥಾನದ ವ್ಯಾಪ್ತಿಯಲ್ಲಿ ತೆಂಗಿನಕಾಯಿ ಮಾರಾಟ ಮಾಡಲು ಹರಾಜು ಪಡೆದುಕೊಂಡವರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ತೆಂಗಿನಕಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ತಾಲ್ಲೂಕು ಅಧ್ಯಕ್ಷ ಹರೀಶ ಪೂಜಾರ ಹಾಗೂ ನಗರ ಘಟಕದ ಅಧ್ಯಕ್ಷ ಬಸವರಾಜ ಕೋರಿ
ಅವರು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕನಕಾಚಲ ದೇವಸ್ಥಾನದ ವ್ಯಾಪ್ತಿಯಲ್ಲಿ 2026ರ ಯುಗಾದಿ ವರೆಗೆ ತೆಂಗಿನಕಾಯಿ ಮಾರಾಟ ಮಾಡಲು ಎಪ್ರಿಲ್ ತಿಂಗಳಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ಪ್ರಕಾಶ ಎಂಬುವವರು ₹29 ಲಕ್ಷ ರೂಪಾಯಿಗೆ ಹರಾಜು ಪಡೆದಿದ್ದು, ಹರಾಜಿನ ನಿಬಂಧನೆಗಳ ಅನ್ವಯ ಪ್ರತಿ ತೆಂಗಿನಕಾಯಿಗೆ ₹30 ರೂಪಾಯಿ ಮಾರಾಟ ಮಾಡಬೇಕು. ಆದರೆ ಟೆಂಡರ್‌ದಾರರು ನಿಯಮಗಳನ್ನು ಗಾಳಿಗೆ ತೂರಿ ಕಾಯಿಗೆ ₹50 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.
₹50 ರೂಪಾಯಿಗೆ ಒಂದು ಕಾಯಿ ಮಾರಾಟ ಮಾಡುವ ಬಗ್ಗೆ ಸಂಘಟನೆ ವತಿಯಿಂದ ವಿಡಿಯೋ ಸಹಿತ ಬಹಿರಂಗಪಡಿಸಿ ತಹಶೀಲ್ದಾರ್ ಅವರ ಗಮನಕ್ಕೆ ತಂದಾಗ ಟೆಂಡರ್‌ದಾರರಿಗೆ ನೋಟಿಸ್ ನೀಡಿ ಕೈ ತೊಳೆದುಕೊಂಡಿದ್ದಾರೆ. ಅವರ ವಿರುದ್ದ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ಗ್ರಾಹಕರಿಗೆ ವಂಚಿಸುತ್ತಿರುವವರ ವಿರುದ್ಧ ಕ್ರಮ ವಹಿಸಬೇಕು, ಟೆಂಡರ್‌ದಾರರು ದೇವಸ್ಥಾನಕ್ಕೆ ಜಮಾವಣೆಯಾಗಬೇಕಿದ್ದ ಹಣವನ್ನು ಇಲ್ಲಿ ವರೆಗೆ ಜಮಾವಣೆ ಮಾಡಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ಲಾಸ್ಟಿಕ್ ನಿಷೇಧವಿದ್ದರೂ ಏಕಬಳಕೆಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನೇ ಬಳಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ವಿದ್ಯಾರ್ಥಿ ಘಟಕದ ಅಧ್ಯಕ್ಷ ರವಿ ಬಲಿಜ ಇದ್ದರು.