
ಕಾರಟಗಿ: ‘ಸತ್ಯ ಸಂಗತಿಗಳನ್ನು ಮರೆಮಾಚಿ ಅತ್ಯಂತ ವೈಭವೀಕರಿಸುತ್ತಿದ್ದರೆ, ಮತ್ತೊಂದೆಡೆ ದುಡಿವ ವರ್ಗಗಳು ದಯನೀಯ ಸ್ಥಿತಿಯಲ್ಲಿ ಬದುಕು ಸವೆಸುತ್ತಿವೆ’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಸಿ.ಬಿ. ಚಿಲ್ಕರಾಗಿ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಮರ್ಲಾನಹಳ್ಳಿಯಲ್ಲಿ ಶನಿವಾರ ನಡೆದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ‘ಚಾರಿತ್ರಿಕ ಮಹತ್ವಗಳನ್ನು ಮರೆತು ಪಾಶ್ಚಾತ್ಯರಿಂದ ನಮ್ಮದೇ ಸಂಗತಿಗಳನ್ನು ತಿಳಿದು ನಾವು ಪ್ರಭಾವಿತರಾಗುತ್ತಿದ್ದೇವೆ’ ಎಂದರು.
ರಾಜ್ಯದಷ್ಟಿರದ ಇಂಗ್ಲೆಂಡ್‍ನನ್ನು ಹಿಂದಿಕ್ಕಿರುವುದನ್ನೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ದೇಶವು ಶಿಕ್ಷಣ, ಆರೋಗ್ಯ, ಸಂತೃಪ್ತ ಜೀವನ, ನೈರ್ಮಲ್ಯದ ಸೂಚ್ಯಂಕಗಳಲ್ಲಿ ಸಣ್ಣ ರಾಷ್ಟ್ರಗಳಿಗೆ ಹೋಲಿಕೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗದಷ್ಟು ಹಿಂದುಳಿದಿರುವುದು ದುರಂತವೇ ಸರಿ’ ಎಂದರು.
‘ಶೈಕ್ಷಣಿಕವಾಗಿ ಪಿಸಾ ಸಂಸ್ಥೆ ಜಗತ್ತಿನ 74 ದೇಶಗಳಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ 15 ವರ್ಷದೊಳಗಿನ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದಲ್ಲಿ ಭಾರತವು 68ನೇ ಸ್ಥಾನದಲ್ಲಿದ್ದರೆ, ಜಗತ್ತಿನ 100 ವಿವಿಗಳಲ್ಲಿ ಭಾರತದ ಒಂದೂ ವಿವಿ ಸ್ಥಾನ ಪಡೆಯಲು ವಿಫಲವಾಗಿದೆ’ ಎಂದರು.
‘ಭಾರತ ಶಿಕ್ಷಣ, ತಂತ್ರಜ್ಞಾನದಲ್ಲಿ ಹಿಂದುಳಿದಿದ್ದು, ಉತ್ಪಾದನಾ ಶಕ್ತಿಯೇ ಇಲ್ಲವಾಗಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಮಾರಿಕೊಳ್ಳುತ್ತಾ ಕೊಳ್ಳುಬಾಕತನಕ್ಕೆ ಜೋತು ಬಿದ್ದಿದ್ದೇವೆ. ಆದರೆ, ವಾಸ್ತವಾಂಶವನ್ನು ಮರೆಮಾಚಿ ಸಣ್ಣ ಸಂಗತಿಗಳನ್ನೇ ಸಾಧನೆ ಎಂದು ಬಿಂಬಿಸಿಕೊಳ್ಳುವ ಪ್ರವೃತ್ತಿಯವರಾಗಿರುವುದು ಸಲ್ಲದು’ ಎಂದರು.
ಶೇ 20 ರಷ್ಟು ಜನರ ಕೈಯಲ್ಲಿ ದೇಶದ ಶ್ರೀಮಂತಿಕೆ ಇದ್ದರೆ, ಶೇ 80ರಷ್ಟಿರುವ ಶ್ರಮಿಕರು, ಕೂಲಿಕಾರ್ಮಿಕರು, ಜನರು ದಯನೀಯ ಸ್ಥಿತಿಯಲ್ಲಿದ್ದಾರೆ. ಮೂಲಭೂತ ಸೌಲಭ್ಯಗಳು ಹಾಗೂ ಅಭಿವೃದ್ಧಿ ವಿಚಾರದಲ್ಲಿ ಇಂದಿಗೂ ಪ್ರಾದೇಶಿಕ ಅಸಮಾನತೆ ವಿಜೃಂಭಿಸುತ್ತಿದೆ. ಇವುಗಳಿಂದ ಮುಕ್ತರಾಗಲು ನಾವು ಪರಸ್ಪರ ಪ್ರೀತಿಸಲು, ಗೌರವಿಸಲು ಕಲಿಯಬೇಕಿದೆ. ಮಹನೀಯರ ಚಿಂತನೆಗಳನ್ನು ಅರಿತು, ಕತೆ, ಕಾವ್ಯ ಹಾಗೂ ಸಾಹಿತ್ಯದಿಂದ ಕಲಿಯುವುದು ಸಾಕಷ್ಟಿದೆ ಎಂಬುದನ್ನು ಅರಿಯಬೇಕಿದೆ ಎಂದವರು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.