ADVERTISEMENT

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಶಾಸಕ ದೊಡ್ಡನಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:41 IST
Last Updated 4 ಡಿಸೆಂಬರ್ 2025, 5:41 IST
ತಾವರಗೇರಾ ಪಟ್ಟಣದಲ್ಲಿ ನಡೆದ ಕನ್ನಡ ರಾಜೋತ್ಸವ ಮತ್ತು ಕನ್ನಡಿಗರ ಉತ್ಸವ ಕಾರ್ಯಕ್ರಮವನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು
ತಾವರಗೇರಾ ಪಟ್ಟಣದಲ್ಲಿ ನಡೆದ ಕನ್ನಡ ರಾಜೋತ್ಸವ ಮತ್ತು ಕನ್ನಡಿಗರ ಉತ್ಸವ ಕಾರ್ಯಕ್ರಮವನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು   

ತಾವರಗೇರಾ: ‘ನಮ್ಮ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಉಳಿದ ಭಾಷೆಗಳು ಬದುಕಲು ಅಷ್ಟೆ. ಆದ್ದರಿಂದ ನಾವು ಕನ್ನಡ ಭಾಷೆ, ನಾಡು-ನುಡಿಗೆ ಧಕ್ಕೆ ಆಗುವ ಸಮಯ ಬಂದರೆ ಒಟ್ಟಾಗಿ ಹೋರಾಟ ಮಾಡುತ್ತೇವೆ. ಕನ್ನಡ ಭಾಷೆಗೆ ಇರುವ ಇತಿಹಾಸ ಯಾವ ಭಾಷೆಗೂ ಇಲ್ಲ. ಆದ್ದರಿಂದ ಕನ್ನಡ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಇಂತಹ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದು ಉತ್ತಮ ಕಾರ್ಯ’ ಎಂದು ಶಾಸಕ ಹಾಗೂ ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಈಚೆಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡಿಗರ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ ಮಾತನಾಡಿ, ‘ನಮ್ಮ ಸಂಘಟನೆಯು ಬೆಳಗಾವಿಯಲ್ಲಿ ಮರಾಠಿಗರು ಹೋರಾಟಕ್ಕಿಳಿದಾಗ ನಾವು ಸಹ ಹೋರಾಟ ಮಾಡಿದ್ದೇವೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಆಡಳಿತ ನಡೆಸಿದರು, ನಮ್ಮ ನಾಡು, ನುಡಿ, ಭಾಷೆ ಬಗ್ಗೆ ಬೇಡಿಕೆಗಳನ್ನು ಈಡೆರಿಸಲು ಹೋರಾಟ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದ ಶಿಕ್ಷಣ, ನೀರಾವರಿ ಇತರೆ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಂತಹ ಕಾರ್ಯ ಮಾಡಿದ್ದೇವೆ. ಆದರೆ ಕನ್ನಡ ನಮ್ಮ ತಾಯಿ ಭಾಷೆ, ನಾವು ಕನ್ನಡದಲ್ಲಿ ಓದಬೇಕು, ಮಾತನಾಡಬೇಕು’ ಎಂದರು.

ADVERTISEMENT

ಪ.ಪಂ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ, ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲತ್ವಾಡ, ಮುಖಂಡ ಚಂದ್ರಶೇಖರ ನಾಲತ್ವಾಡ, ಶೇಖರಪ್ಪ ಮುತ್ತೆನವರ ಮಾತನಾಡಿದರು. ಕಿರುತೆರೆ ನಟರಾದ ವಿನೋದ ಗೊಬ್ಬರಗಾಲ, ಹಾಸ್ಯ ಕಲಾವಿದ ಚಂದ್ರಪ್ರಭಾ, ಮುತ್ತು ಹಳಿಯಾಳ, ಗಾಯಕಿ ರೇಷ್ಮಾ ಅವರ ತಂಡದಿಂದ ಮನರಂಜನೆ ಕಾರ್ಯಕ್ರಮ ಜರುಗಿತು.

ಕನ್ನಡ ಸೇನೆ ಕರ್ನಾಟಕ ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ಅಮರೇಶ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಸಿದ್ಧರೂಡ ಮಠದ ಕುಮಾರ ಸಿದ್ಧರೂಡ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪಿಎಸ್‌ಐ ಚಂದ್ರಪ್ಪ, ಸಾಗರ ಬೇರಿ, ಅಮರ ಪಾಟೀಲ, ವೀರನಗೌಡ ಪಾಟೀಲ, ಮಂಜುನಾಥ ಜೂಲಕುಂಟಿ, ಸಂಘಟನೆಯ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಚನ್ನಬಸವ ಜೇಕಿನ್, ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ, ವೀರೇಶ ಗೌಡ್ರ, ಶ್ಯಾಮಮೂರ್ತಿ ಹಂಚಿ ಸೇರಿದಂತೆ ಅನೇಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.