ADVERTISEMENT

ಕಾರಟಗಿ: ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಆಹಾರ ಮೇಳ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:16 IST
Last Updated 19 ಜನವರಿ 2026, 6:16 IST
<div class="paragraphs"><p>ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್‌ನಲ್ಲಿ ಭಾನುವಾರ ನಡೆದ ವಿಜ್ಞಾನ ವೀಕ್ಷಣೆ ಮತ್ತು ಆಹಾರ ಮೇಳವನ್ನು ಪಾಲಕರು, ವಿಜ್ಞಾನಿಗಳು ವೀಕ್ಷಿಸಿದರು</p></div>

ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್‌ನಲ್ಲಿ ಭಾನುವಾರ ನಡೆದ ವಿಜ್ಞಾನ ವೀಕ್ಷಣೆ ಮತ್ತು ಆಹಾರ ಮೇಳವನ್ನು ಪಾಲಕರು, ವಿಜ್ಞಾನಿಗಳು ವೀಕ್ಷಿಸಿದರು

   

ಕಾರಟಗಿ: ‘ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಬೆಳೆಸುವ ವಿಜ್ಞಾನ ವಸ್ತು ಪ್ರದರ್ಶನಗಳು ಆಗಾಗ ಆಯೋಜನೆಯಾದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಯುವ ವಿಜ್ಞಾನಿಗಳು ಹುಟ್ಟಿಕೊಳ್ಳಲು ಸಹಾಯವಾಗುತ್ತದೆ. ನಮ್ಮ ದೇಶ ಸಂಶೋಧನೆ, ವಿಜ್ಞಾನದಲ್ಲಿ ಇನ್ನೂ ಹೆಚ್ಚು ಪ್ರಗತಿಯನ್ನು ಸಾಧಿಸಬೇಕು’ ಎಂದು ಇಸ್ರೋದ ನಿವೃತ್ತ ಹಿರಿಯ ವಿಜ್ಞಾನಿ ಮತ್ತು ಎಂಜಿನಿಯರ್ ಎಚ್. ಎಲ್. ಶ್ರೀನಿವಾಸ ಹೇಳಿದರು.

ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ನಡೆದ ವಿಜ್ಞಾನ ವೀಕ್ಷಣೆ ಮತ್ತು ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು ಭಾರತವನ್ನು ಇನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ಯತ್ನದಲ್ಲಿ ಅವರು ಸಫಲರಾಗಲಿ’ ಎಂದು ಹಾರೈಸಿದರು.

ADVERTISEMENT

ವಿಜ್ಞಾನಿ, ಗ್ರಾವಿಟಿ ಫೌಂಡೇಶನ್ ಸಂಸ್ಥಾಪಕ ಅಭಿಷೇಕ್ ಎ. ಮಾತನಾಡಿ, ‘ವೈಜ್ಞಾನಿಕ ಆಲೋಚನೆ ಮೈಗೂಡಿಸಿಕೊಂಡು ಹೊಸ ಅನ್ವೇಷಣೆಗಳನ್ನು ಪ್ರಾರಂಭಿಸಿ ಹೆಚ್ಚಿನ ಸಾಧನೆ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಬಿ., ಕಾರ್ಯಕ್ರಮವನ್ನು ಶ್ಲಾಘಿಸಿದರು. 

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಲೀಲಾ ಮಲ್ಲಿಕಾರ್ಜುನ ಮಾತನಾಡಿ, ‘ನಮ್ಮ ಭಾಗದ ವಿದ್ಯಾರ್ಥಿಗಳೂ ವಿಜ್ಞಾನಿಗಳಾಗಿ ಸಾಧನೆ ಮೆರೆಯಬೇಕು ಎಂಬ ಆಶಯದಿಂದ ಅದಕ್ಕೆ ಪೂರಕವಾಗುವ ಕಾರ್ಯಕ್ರಮಗಳನ್ನು ಆಗಾಗ ಆಯೋಜಿಸಲಾಗುತ್ತಿದೆ’ ಎಂದರು.

ಪ್ರಾಥಮಿಕ ಶಾಲಾ ಮಕ್ಕಳಿಗೆ ಆಹಾರ ಮೇಳವನ್ನು ಏರ್ಪಡಿಸಲಾಗಿತ್ತು. ಚಿಕ್ಕ ಮಕ್ಕಳು ಮನೆಯಿಂದ ಸಿದ್ಧಪಡಿಸಿಕೊಂಡು ತಂದಿದ್ದ ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ಮಾರಾಟ ಮಾಡಿ, ತಮ್ಮ ವ್ಯಾಪಾರಿ ಕೌಶಲ್ಯವನ್ನು ಪ್ರದರ್ಶಿಸಿದರು. ಚಿಕ್ಕ ಮಕ್ಕಳ ಜ್ಞಾನಕ್ಕೆ ಪಾಲಕರು ಮತ್ತು ಶಿಕ್ಷಕರು ಅಚ್ಚರಿ, ಸಂತಸ ವ್ಯಕ್ತಪಡಿಸಿದರು.

ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿಚ್ಚಿಗಲ್, ಪ್ರಾಚಾರ್ಯ ಹನುಮಂತಪ್ಪ ವಿಟಿ, ವಿವಿಧ ಶಾಲೆಗಳ 800ಕ್ಕೂ ಅಧಿಕ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.