ವಿ.ಎಸ್.ಉಗ್ರಪ್ಪ ಮತ್ತು ಜಿ.ಎಸ್. ಸಂಗ್ರೇಶಿ
ಕೊಪ್ಪಳ: ‘ಸಾಮಾಜಿಕ ನ್ಯಾಯದ ತಳಹದಿಯಿಂದ ಬಂದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಾರರು. ಆದರೂ ಸರ್ಕಾರಿ ಕಾರ್ಯಕ್ರಮದಲ್ಲಿ ನಮ್ಮ ತಟ್ಟೆಯಲ್ಲಿನ ಅನ್ನ ಕಸಿದುಕೊಳ್ಳಬೇಡಿ ಎಂದಿದ್ದು ಸರಿಯಲ್ಲ’ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಬೇಸರ ವ್ಯಕ್ತಪಡಿಸಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ‘ಸಾಮಾಜಿಕ ನ್ಯಾಯಕ್ಕಾಗಿ ಜೀವನ ಮುಡಿಪಾಗಿಟ್ಟ ಸಿದ್ದರಾಮಯ್ಯ ಅವರಿಗೆ ಮುಜುಗರ ಆಗುವ ರೀತಿಯಲ್ಲಿ ಉಗ್ರಪ್ಪ ಮಾತನಾಡಬಾರದಿತ್ತು. ಸಿ.ಎಂ. ಎಂದಿಗೂ ಇನ್ನೊಬ್ಬರ ಅನ್ನ ಕಸಿದುಕೊಳ್ಳುವುದಿಲ್ಲ. ಅವರು ಒಂದು ಜನಾಂಗಕ್ಕೆ ಸೀಮಿತರಲ್ಲ. ಪಕ್ಷ ಅಥವಾ ಬೇರೆ ವೇದಿಕೆಗಳಲ್ಲಿ ಮೀಸಲಾತಿ ಬಗ್ಗೆ ಪ್ರಶ್ನಿಸಬಹುದಿತ್ತು. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ. ಪ್ರಜ್ಞಾವಂತರು ಇದನ್ನು ಒಪ್ಪುವುದಿಲ್ಲ. ನನಗೆ ಗೊತ್ತಿರುವ ಮಾಹಿತಿ ಹೇಳಬೇಕು. ಇಲ್ಲದಿದ್ದರೆ ನನ್ನದೂ ತಪ್ಪಾಗುತ್ತದೆ’ ಎಂದರು.
‘ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಮೀಕ್ಷೆಯಿಂದ ಎಲ್ಲ ಸಮುದಾಯಗಳ ಜನರ ಮಾಹಿತಿ ಗೊತ್ತಾಗುತ್ತದೆ. ಅವರಿಗೆ ಕಲ್ಯಾಣ ಯೋಜನೆ ರೂಪಿಸಲು ಸಮೀಕ್ಷೆಯಿಂದ ಲಭಿಸುವ ದತ್ತಾಂಶಗಳು ಅನುಕೂಲವಾಗುತ್ತವೆ’ ಎಂದು ಹೇಳಿದರು.
ಪರಿಷ್ಕರಣೆ: ‘ಸುಪ್ರೀಂ ಕೋರ್ಟ್ ಆದೇಶದಂತೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕಿದ್ದು, ನವೆಂಬರ್‌ನಿಂದ ಕೆಲಸ ಆರಂಭಿಸುತ್ತೇವೆ. ಕೇಂದ್ರ ಚುನಾವಣಾ ಆಯೋಗ ನಾವು ಮಾಡಿದ ಬಳಿಕ ಪಟ್ಟಿ ಪರಿಷ್ಕರಿಸಲಿ ಎಂದು ಪತ್ರ ಬರೆದಿದ್ದೇನೆ. ಅವರೂ ಸ್ಥಳೀಯ ಸಂಸ್ಥೆ ಚುನಾವಣೆ ಇರುವೆಡೆ ಪರಿಷ್ಕರಣೆ ಮಾಡುವುದಿಲ್ಲವೆಂದು ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.